ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಮೇಲೆ ನೆರೆಯ ಆಂಧ್ರಪ್ರದೇಶ ರಾಜ್ಯದ ಪ್ರಾದೇಶಿಕ ಪಕ್ಷಗಳ ಕರಿನೆರಳು ಬಿದ್ದಿದೆ ಎಂಬ ಚರ್ಚೆ ಶುರುವಾಗಿದೆ. 2017ರಲ್ಲೇ ತೆಲುಗು ದೇಶಂ ಪಕ್ಷದ ಅಭ್ಯರ್ಥಿಯನ್ನು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಪ್ರಯತ್ನ ನಡೆದಿತ್ತು ಎನ್ನಲಾಗಿದೆ.
ಗಣಿನಗರಿ ಬಳ್ಳಾರಿಯ ಸ್ಥಳೀಯ ನಿವಾಸಿಗಳ ಪ್ರಬಲ ವಿರೋಧದಿಂದಾಗಿ ತೆಲುಗು ದೇಶಂ ಪಾರ್ಟಿಯು, ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನದಿಂದ ಹಿಂದೆ ಸರಿದಿರೋದು ಕೂಡ ಇದೀಗ ಬೆಳಕಿಗೆ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ನೂತನ ವಿಜಯನಗರ ಜಿಲ್ಲೆ ಘೋಷಣೆ ಹಾಗೂ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯ ವಿರೋಧಿ ಹೋರಾಟವೇ ಸಾಕ್ಷಿಯಾಗಿದೆ.
ಓದಿ: ಮುತ್ತಪ್ಪ ರೈ ಬಯೋಪಿಕ್ ವಿವಾದ: ಅನುಮತಿ ಪಡೆದು ಸಿನಿಮಾ ಮಾಡಿ ಎಂದ ರೈ ಆಪ್ತ
ಅಂದಾಜು 11 ತಾಲೂಕುಗಳನ್ನು ಹೊಂದಿರುವ ಗಣಿ ಜಿಲ್ಲೆ ಭಾಷಾ ಬಾಂಧವ್ಯವನ್ನು ಹೊಂದಿದೆ. ತೆಲುಗು-ಕನ್ನಡ ಭಾಷಿಕರ ನಡುವೆ ಇಲ್ಲಿ ಉತ್ತಮ ಜೀವನ ಸಾಗುತ್ತಿದೆ. ಇದೀಗ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯಿಂದ ಬಳ್ಳಾರಿ ಕೇವಲ ಐದು ತಾಲೂಕುಗಳನ್ನು ಹೊಂದಲಿದೆ. ಹೀಗಾಗಿ, ಯಾವ ಕ್ಷಣದಲ್ಲಾದರೂ ಕೂಡ ನೆರೆಯ ಆಂಧ್ರಪ್ರದೇಶ ರಾಜ್ಯದ ಪ್ರಾದೇಶಿಕ ಪಕ್ಷಗಳು ಇಲ್ಲಿ ಬಂದು ರಾಜಕೀಯವಾಗಿ ನೆಲೆಯೂರುವ ಸಾಧ್ಯತೆ ಹೆಚ್ಚಿದೆ. ಈ ಜಿಲ್ಲೆ ವಿಭಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮತ್ತು ರಾಜ್ಯ ಸರ್ಕಾರ ಮುಂದಾಗಿರೋದರ ಹಿಂದೆ ಈ ರೀತಿ ಒಳಮರ್ಮ ಅಡಗಿದೆ ಎನ್ನಲಾಗುತ್ತಿದೆ.
ಈ ಸಂಬಂಧ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಹಿರಿಯ ಮುಖಂಡ ಸಿರಿಗೇರಿ ಪನ್ನರಾಜ, ಕಳೆದ ವಿಧಾನಸಭಾ ಚುನಾವಣೆ ಘೋಷಣೆಯಾಗುವುದಕ್ಕೆ ಮುಂಚೆಯೇ ನೆರೆಯ ಆಂಧ್ರಪ್ರದೇಶದ ಟಿಡಿಪಿ ಮುಖಂಡರೊಬ್ಬರು ನನ್ನನ್ನು ಸಂಪರ್ಕಿಸಿ, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಚರ್ಚಿಸಿದ್ದರು. ಆಗ ನಾನು ವಿರೋಧ ವ್ಯಕ್ತಪಡಿಸಿದ್ದೆ ಎಂದರು.