ಬಳ್ಳಾರಿ: ಯೋಜನೆಯಂತೆ ನಡೆದಿದ್ದರೆ ಹೊಸಪೇಟೆ–ಬಳ್ಳಾರಿ ನಡುವಿನ ಹೆದ್ದಾರಿ 63ರ ಚತುಷ್ಪಥ ರಸ್ತೆ ಕಾಮಗಾರಿ ಮುಗಿದು ಮೂರು ವರ್ಷಗಳಾಗುತ್ತಿತ್ತು. ಆದರೆ ಗುತ್ತಿಗೆ ಪಡೆದ ಕಂಪನಿಯ ನಿರ್ಲಕ್ಷ್ಯದಿಂದಾಗಿ ಹೆದ್ದಾರಿ ಕಾಮಗಾರಿ ನಿಂತು ಹೋಗಿದೆ. ರಸ್ತೆ ಕೆಲಸ ಪೂರ್ಣಗೊಂಡಿದ್ದರೆ ಹೊಸಪೇಟೆಯಿಂದ ಬಳ್ಳಾರಿಗೆ ಕೇವಲ 45 ನಿಮಿಷಗಳಲ್ಲಿ ಕ್ರಮಿಸಬಹುದಿತ್ತು. ಆದರೆ, ಬಹುತೇಕ ಕಡೆ ಅರ್ಧಂಬರ್ಧ ಕಾಮಗಾರಿ, ಕಿರು ಸೇತುವೆ, ಮೇಲುಸೇತುವೆ ನಿರ್ಮಾಣ ಕೆಲಸ ನೆನೆಗುದಿಗೆ ಬಿದ್ದಿದ್ದು ಈಗಲೂ ಬಳ್ಳಾರಿಗೆ ಕ್ರಮಿಸಲು ಎರಡು ಗಂಟೆ ಸಮಯ ಬೇಕು.
ಹಲವೆಡೆ ಒಂದು ಬದಿಯಲ್ಲಿ ಮಾತ್ರ ಸಿ.ಸಿ.ರಸ್ತೆ ನಿರ್ಮಿಸಲಾಗಿದೆ. ಇನ್ನೊಂದು ಬದಿಯಲ್ಲಿ ರಸ್ತೆ ನಿರ್ಮಿಸದ ಕಾರಣ ಹಳೆಯ ರಸ್ತೆಯಲ್ಲೇ ಎದುರು–ಬದುರು ವಾಹನಗಳು ಸಂಚರಿಸುವ ಅನಿವಾರ್ಯತೆ ಇದೆ. ಕಿರಿದಾದ ರಸ್ತೆಯಲ್ಲಿ ಅಪಘಾತಗಳು ಸರ್ವೇ ಸಾಮಾನ್ಯವಾಗಿದೆ ಎಂದು ಸ್ಥಳಿಯರು ದೂರಿದ್ದಾರೆ.
2017ರಲ್ಲಿ ಆರಂಭಗೊಂಡಿರುವ ಕಾಮಗಾರಿ 2019ನೇ ಸಾಲಿನ ಮಾರ್ಚ್‌ನಲ್ಲಿ ಮುಗಿಯಬೇಕಿತ್ತು. 2022ನೇ ವರ್ಷ ಪ್ರಗತಿಯಲ್ಲಿದ್ದರೂ ಹೇಳಿಕೊಳ್ಳುವಂತಹ ಪ್ರಗತಿಯಾಗಿಲ್ಲ. ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಗ್ಯಾಮನ್ ಇಂಡಿಯಾ ಕಂಪನಿಯ ವಿಳಂಬ ಧೋರಣೆಯೇ ಇದಕ್ಕೆ ಕಾರಣವೆನ್ನಲಾಗುತ್ತಿದೆ.
ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗ್ಯಾಮನ್ ಇಂಡಿಯಾ ಕಂಪನಿ ಪಡೆದ ಗುತ್ತಿಗೆ ರದ್ದುಗೊಳಿಸಿ ಬೇರೊಂದು ಕಂಪನಿಗೆ ಜವಾಬ್ದಾರಿ ವಹಿಸಲು ಮುಂದಾಗಿದೆ. 95.37 ಕಿ.ಮೀ ಚತುಷ್ಪಥ ನಿರ್ಮಾಣಕ್ಕೆ ₹900 ಕೋಟಿ ಅಂದಾಜು ವೆಚ್ಚದ ಯೋಜನೆ ಹಾಕಿಕೊಳ್ಳಲಾಗಿತ್ತು. ಈಗ ನಾಲ್ಕು ವರ್ಷ ವಿಳಂಬವಾಗಿದ್ದು ಸಹಜವಾಗಿಯೇ ಕಾಮಗಾರಿ ವೆಚ್ಚ ಕೂಡ ಹೆಚ್ಚಾಗಲಿದೆ.
ಇದನ್ನೂ ಓದಿ: ಕೆಪಿಎಸ್ಸಿ: 106 ಗೆಜೆಟೆಡ್ ಪ್ರೊಬೇಷನರಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ