ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ನೌಕರರು ಪಾರದರ್ಶಕತೆಗೆ ಧಕ್ಕೆ ತಂದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬಳ್ಳಾರಿ ಜಿಲ್ಲಾಧಿಕಾರಿ ಪವನ ಕುಮಾರ ಮಾಲಪಾಟಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
'ಬಳ್ಳಾರಿ ಪಾಲಿಕೆ ಚುನಾವಣಾ ಕರ್ತವ್ಯಕ್ಕೆ ಸ್ಥಳೀಯ ನೌಕರರ ನಿಯೋಜನೆ: ಎಲ್ಲಿದೆ ಪಾರದರ್ಶಕತೆ' ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ವಿಸ್ತೃತವಾದ ವರದಿ ಪ್ರಕಟಿಸಿತ್ತು. ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಡಿಸಿ ಪವನಕುಮಾರ ಮಾಲಪಾಟಿ, ಮಹಾನಗರ ಪಾಲಿಕೆ ಚುನಾವಣಾ ಕರ್ತವ್ಯಕ್ಕೆ ಯಾರೇ ನಿಯೋಜನೆಗೊಂಡರೂ ಪರವಾಗಿಲ್ಲ. ಅದು ಸ್ಥಳೀಯರೇ ಆಗಲಿ ಅಥವಾ ಹೊರಗಿನವರೇ ಆಗಲಿ. ಈ ಚುನಾವಣಾ ಕರ್ತವ್ಯದಲ್ಲಿ ಕಡ್ಡಾಯವಾಗಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಪಾರದರ್ಶಕತೆಗೆ ಧಕ್ಕೆಯಾಗಿರುವ ಯಾವುದೇ ದೂರುಗಳು ಬಂದಲ್ಲಿ ಖಂಡಿತವಾಗಿಯೂ ಕೂಡ ಶಿಸ್ತು ಕ್ರಮ ಕೈಗೊಳ್ಳುವೆ. ಯಾಕೆಂದರೆ, ಅವರೆಲ್ಲರೂ ಸರ್ಕಾರಿ ನೌಕರರು. ಈ ಪಾಲಿಕೆ ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲೇಬೇಕೆಂದು ಹೇಳಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ:
ಜಿಂದಾಲ್ ಸಮೂಹ ಸಂಸ್ಥೆ ಸೇರಿದಂತೆ ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಜಿಂದಾಲ್ ಸಮೂಹ ಸಂಸ್ಥೆ ನೌಕರರಲ್ಲಿ ಈ ಸೋಂಕು ಹರಡುವಿಕೆ ಹೆಚ್ಚಿದೆ. ಹೊರ ರಾಜ್ಯಗಳಿಂದ ಬಂದಂತಹ ಕಾರ್ಮಿಕರಿಂದ ಈ ಸೋಂಕು ಹೆಚ್ಚಾಗುತ್ತಿದೆ ಎಂದು ಹೇಳಲಿಕ್ಕಾಗಲ್ಲ. ಈಗಾಗಲೇ ಸಮುದಾಯದೊಳಗಡೆ ಈ ಸೋಂಕು ವ್ಯಾಪಕವಾಗಿ ಹಬ್ಬಿದೆ. ಹೀಗಾಗಿ, ಅದರ ನಿಯಂತ್ರಣ ಮಾಡಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದರು.
ಚೆಕ್ ಪೋಸ್ಟ್ನ ಮುಖ್ಯ ಉದ್ದೇಶ ಸೋಂಕು ಹರಡುವಿಕೆ ತಡೆಯುವುದು:
ಅಂತಾರಾಜ್ಯ ಗಡಿಭಾಗದಲ್ಲಿ ಪುನರ್ ಸ್ಥಾಪಿಸಲಾದ ಚೆಕ್ ಪೋಸ್ಟ್ಗಳ ಮುಖ್ಯ ಉದ್ದೇಶ ಕೊರೊನಾ ಎರಡನೇ ಅಲೆಯ ಸೋಂಕು ಹರಡುವಿಕೆಯನ್ನು ತಡೆಗಟ್ಟೋದೇ ಆಗಿದೆ. ಹೀಗಾಗಿ, ಚೆಕ್ ಪೋಸ್ಟ್ಗಳಲ್ಲಿ ಸಾರ್ವಜನಿಕ ಸಂಚಾರಿ ವ್ಯವಸ್ಥೆಯಲ್ಲಿರುವ ಪ್ರತಿಯೊಬ್ಬರನ್ನೂ ಕೂಡ ತಪಾಸಣೆಗೆ ಒಳಪಡಿಸಲಾಗುವುದು ಎಂದರು.