ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾಡಂಗ ಗ್ರಾಮಕ್ಕೆ ಸಮೀಕ್ಷೆಗೆಂದು ತೆರಳಿದ್ದ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಎ.ಆರ್.ಆಶಾ, ಪ್ರತಿನಿತ್ಯ ನಾಡಂಗ ಗ್ರಾಮಕ್ಕೆ ಆಂಧ್ರ ಪ್ರದೇಶದಿಂದ ಕ್ವಾರಂಟೈನ್ ಮುಗಿಸಿದ ಸಾಕಷ್ಟು ಜನರು ಬರುತ್ತಿದ್ದಾರೆ. ಗ್ರಾಮದಲ್ಲಿ ಕೆಲವೊಂದು ಮದುವೆ ಕಾರ್ಯಕ್ರಮಗಳು ನಡೆಯುತ್ತಿವೆ. ಹೀಗಾಗಿ ಆ ಪ್ರದೇಶವನ್ನು ಸಮೀಕ್ಷೆ ಮಾಡಲು ಹೋಗಿದ್ದೆವು. ಈ ವೇಳೆ ಆಶಾ, ಅಂಗನವಾಡಿ ಕಾರ್ಯಕರ್ತೆ ಹಾಗೂ ಗ್ರಾಮ ಸಹಾಯಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಆಶಾ ಕಾರ್ಯಕರ್ತೆ ಬಸಮ್ಮ ಮಾತನಾಡಿ, ಕ್ವಾರಂಟೈನ್ ಮುಗಿಸಿ ಮನೆಗೆ ಬಂದವರ ಬಗ್ಗೆ ಮಾಹಿತಿ ಪಡೆಯಲು ನಾಡಂಗ ಗ್ರಾಮಕ್ಕೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಸಹಾಯಕ, ಗ್ರಾಮ ಲೆಕ್ಕಿಗ ಹೋದಾಗ ನಾಲ್ವರು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಳಿದರು.
ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಗೆ ಕೂಲಿ ಅರಸಿಕೊಂಡು ಹೋಗಿದ್ದ ನಾಡಂಗ ಗ್ರಾಮದ ದೊಡ್ಡ ರಾಮಪ್ಪ, ಹುಲಿಗೆಮ್ಮ, ದುರುಗಮ್ಮ ಮತ್ತು ರಂಗಸ್ವಾಮಿ ಎಂಬುವರು ಇತ್ತೀಚೆಗೆ ಗ್ರಾಮಕ್ಕೆ ಮರಳಿ ಬಂದಿದ್ದರು. ಘಟನಾ ಸ್ಥಳಕ್ಕೆ ಸಿರುಗುಪ್ಪ ತಾಪಂ ಇಒ ಆಗಮಿಸಿ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಎ.ಆರ್.ಆಶಾ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.