ಹೊಸಪೇಟೆ : ವಿಶ್ವವಿಖ್ಯಾತ ಹಂಪಿ ಲೋಟಸ್ ಮಹಲ್ ಬಳಿ ರಾಜ್ಯ ಪುರಾತತ್ವ ಇಲಾಖೆ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಿದೆ. ನಿರಂತರವಾಗಿ ಐದು ತಿಂಗಳ ಕಾಲ ಈ ಉತ್ಖನನ ನಡೆಯಲಿದೆ.
ಪ್ರತಿ ವರ್ಷ ಹಂಪಿಯ ಒಂದೊಂದು ಪ್ರದೇಶದಲ್ಲಿ ಉತ್ಖನನ ಮಾಡಲಾಗುತ್ತದೆ. ಈ ಬಾರಿ ಲೋಟಸ್ ಮಹಲ್ ಬಳಿ ಮಾಡಲಾಗುತ್ತಿದೆ. ಈಗಾಗಲೇ ಸ್ಥಳವನ್ನು ಗುರುತು ಮಾಡಲಾಗಿದೆ. ಈ ಕಾರ್ಯದಲ್ಲಿ ಯಂತ್ರಗಳನ್ನು ಬಳಕೆ ಮಾಡುತ್ತಿಲ್ಲ. 30ಕ್ಕೂ ಹೆಚ್ಚು ಕಾರ್ಮಿಕರ ಸಹಾಯದಿಂದ ಉತ್ಖನನ ಮಾಡಲಾಗುತ್ತಿದೆ.
ಇಲ್ಲಿ ದೊರೆಯುವ ಅವಶೇಷಗಳಿಂದ ಸಂಸ್ಕೃತಿ ಹಾಗೂ ಆಚಾರ ವಿಚಾರಗಳನ್ನು ತಿಳಿಯಲಾಗುತ್ತಿದೆ. ಅವಶೇಷಗಳಿಂದ ಮಾಹಿತಿ ಪಡೆದು ಇತಿಹಾಸ ತಿಳಿಸುವಂತಹ ಪ್ರಯತ್ನ ಮಾಡಲಾಗುತ್ತಿದೆ ಎಂದು ಪುರಾತತ್ವ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಇದನ್ನೂ ಓದಿ: ಎಷ್ಟೇ ಕಷ್ಟವಾದರೂ ನೀರಾವರಿ ಯೋಜನೆಗಳಿಗೆ ಅನುದಾನ ಕೊಡುತ್ತೇನೆ: ಸಿಎಂ ಭರವಸೆ
ಕಮಲಾಪುರದ ರಾಜ್ಯ ಪುರಾತತ್ವ ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯ ಉಪನಿರ್ದೇಶಕ ಜಿ. ಪ್ರಲ್ಹಾದ್ ಅವರು ಮಾತನಾಡಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅನುಮತಿ ಮೇರೆಗೆ ಉತ್ಖನನ ಕಾರ್ಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವಶೇಷಗಳಿಂದ ಮಾಹಿತಿ ಲಭ್ಯವಾಗಲಿದೆ ಎಂದರು.