ಬಳ್ಳಾರಿ: ವಿ.ವಿ. ವ್ಯಾಪ್ತಿಯಲ್ಲಿ 20 ಬಿ.ಇಡಿ ಕಾಲೇಜುಗಳು ಬರುತ್ತವೆ. ಇದರಲ್ಲಿ ಹೊಸಪೇಟೆ ನ್ಯಾಷನಲ್ ಬಿ.ಇಡಿ ಕಾಲೇಜು, ಷಾ ಭವರಲಾಲ್ ಕಾಲೇಜು ಮತ್ತು ಸಂಡೂರಿನ ಲಕ್ಷ್ಮೀ ಎಸ್.ನಾನಾವಟೆ ಬಿ.ಇಡಿ ಕಾಲೇಜುಗಳು ವಿದ್ಯಾರ್ಥಿಗಳಿಗೆ ನಿಯಮಬಾಹಿರವಾಗಿ ಅಂಕ ನೀಡಿರುವುದು ತಿಳಿದು ಬಂದಿತ್ತು. ಗೈರಾದ ವಿದ್ಯಾರ್ಥಿಗಳಿಗೆ ಮಾರ್ಕ್ಸ್ ನೀಡಿರೋದಕ್ಕೆ ವಿಎಸ್ಕೆ ವಿವಿ ಕೇವಲ ದಂಡದ ಪ್ರಯೋಗ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಿಎಸ್ಕೆ ಪ್ರತಿಯಲ್ಲಿ ಏನಿದೆ?
ವಿಶ್ವ ವಿದ್ಯಾಲಯದ ಅಧೀನದಲ್ಲಿ ಬರುವ ಬಿ.ಇಡಿ ಕಾಲೇಜುಗಳು ದ್ವಿತೀಯ ಹಾಗೂ ಚತುರ್ಥ ಸೆಮಿಸ್ಟರ್ ಪರೀಕ್ಷೆಯಲ್ಲಿ ಮಿತಿ ಮೀರಿ ಆಂತರಿಕ ಅಂಕಗಳನ್ನು ನೀಡಿದ್ದು ಹಾಗೂ ಪ್ರಾಯೋಗಿಕ ಪರೀಕ್ಷೆಗಳಿಗೆ ಗೈರಾದ ವಿದ್ಯಾರ್ಥಿಗಳಿಗೆ ಅಂಕ ನೀಡಿದ ಕಾಲೇಜುಗಳಿಗೆ ಸತ್ಯ ಶೋಧನಾ ಸಮಿತಿಯು ಭೇಟಿ ನೀಡಿ ವರದಿಯನ್ನು ಪಡೆದಿತ್ತು. ಸಮಿತಿಯು ತನ್ನ ವರದಿಯಲ್ಲಿ ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಹಾಗೂ ಪ್ರಾಚಾರ್ಯರನ್ನು ಸಮಗ್ರವಾಗಿ ವಿಚಾರಿಸಿದಾಗ ಮಿತಿ ಮೀರಿ ಅಂಕ ನೀಡಿರುವುದನ್ನು ಒಪ್ಪಿಕೊಂಡಿದ್ದರು. ಮುಂದೆ ಹೀಗಾಗದಂತೆ ಎಚ್ಚರವಹಿಸಬೇಕು. ಹೆಚ್ಚುವರಿ ಅಂಕವನ್ನು ನೀಡಿದಿರುವುದಕ್ಕೆ ಸಮಿತಿಯು ಕಾಲೇಜುಗಳಿಗೆ ದಂಡವನ್ನು ವಿಧಿಸಿತ್ತು. ನ್ಯಾಷನಲ್ ಶಿಕ್ಷಣ ಕಾಲೇಜಿಗೆ 5 ಲಕ್ಷ ರೂ., ಶಾ ಭವರ್ ಲಾಲ್ ಶಿಕ್ಷಣ ಕಾಲೇಜಿಗೆ-2 ಲಕ್ಷ ರೂ., ನಾನಾವಟೆ ಶಿಕ್ಷಣ ಕಾಲೇಜಿಗೆ-1 ಲಕ್ಷ ರೂ. ದಂಡವನ್ನು ವಿಧಿಸಲಾಗಿತ್ತು.
ವಿವಾದದ ವಿಶ್ವವಿದ್ಯಾಲಯ
ಈ ಹಿಂದೆ ಅಕ್ರಮ ನೇಮಕಾತಿ ಮೂಲಕ ವಿಶ್ವ ವಿದ್ಯಾಲಯವು ರಾಜ್ಯದಲ್ಲಿ ಟೀಕೆಗೆ ಗುರಿಯಾಗಿತ್ತು. ಈಗ ಹೆಚ್ಚುವರಿ ಅಂಕ ನೀಡಿದ ಕಾಲೇಜುಗಳಿಗೆ ದಂಡ ವಿಧಿಸಿ ಸುಮ್ಮನಾಗಿರೋದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಎಸ್ಕೆ ವಿವಿ ಕುಲಪತಿ ಸಿದ್ದು ಅಲಗೂರು ಅವರು ಮಾತನಾಡಿ, ಸತ್ಯ ಶೋಧನ ಸಮಿತಿಯ ವರದಿಯಂತೆ ಕ್ರಮಕೈಗೊಳ್ಳಲಾಗಿದೆ. ಅಲ್ಲದೇ, ಕಾಲೇಜುಗಳು ತಪ್ಪನ್ನು ಒಪ್ಪಿಕೊಂಡಿವೆ. ಹಾಗಾಗಿ ದಂಡವನ್ನು ಹಾಕಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಈ ಟಿವಿ ಭಾರತ ಹೊಸಪೇಟೆ ತಾಲೂಕಿನ SFI ಅಧ್ಯಕ್ಷ ಶಿವಕುಮಾರ್ ಅವರನ್ನ ಸಂಪರ್ಕಿಸಿದಾಗ, ಹೆಚ್ಚುವರಿ ಅಂಕ ನೀಡಿದ ಬಿ.ಇಡಿ ಕಾಲೇಜುಗಳನ್ನ ಕಪ್ಪು ಪಟ್ಟಿಗೆ ಸೇರಿಸಬೇಕು. ಆದರೆ, ದಂಡ ಹಾಕಿ ಸಿಎಸ್ಕೆ ಕೈ ತೊಳೆದುಕೊಂಡಿದೆ. ವಿವಿಯು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿಲ್ಲ. ಶಿಕ್ಷಣವನ್ನು ವ್ಯಾವಹಾರಿಕ ದೃಷ್ಟಿಕೋನದಿಂದ ನೋಡುತ್ತಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.