ವಿಜಯನಗರ: ಸಂಪೂರ್ಣ ಮಳೆ ಹಾಗೂ ಬೆಳೆಯ ಕೊರತೆಯಿಂದ ರೈತ ಸಮುದಾಯ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ ಮಳೆರಾಯನ ಮುನಿಸಿನಿಂದ ಬರಗಾಲ ಸೃಷ್ಟಿಯಾಗಿದೆ. ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು ತಾಲೂಕುಗಳನ್ನು ರಾಜ್ಯ ಸರ್ಕಾರ ಬರ ಪೀಡಿತ ಘೋಷಿಸಿದೆ. ಜಿಲ್ಲೆಯಲ್ಲಿ ಸಂಪೂರ್ಣ ಮಳೆ ಅಭಾವದಿಂದ ರೈತರು ಬೆಳೆದ ಬೆಳೆಗಳು ಮೊಳಕೆಯಲ್ಲೇ ಬಾಡಿ ಹೋಗಿವೆ.
ಇನ್ನೂ ಕೆಲವು ಬೆಳೆಗಳು ತೆನೆ ಕಟ್ಟುವ ಹಂತದಲ್ಲಿ ಬೆಳೆ ಸಂಪೂರ್ಣವಾಗಿ ಹಾಳಾಗಿವೆ. ಈ ಮೂಲಕ ಸರ್ಕಾರವು ರೈತರ ನೆರವಿಗೆ ಮುಂದಾಗಬೇಕಿದೆ. ಈ ಕೂಡಲೇ ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಿ, ಆದಷ್ಟು ಬೇಗ ಬರ ಪರಿಹಾರ ಕಾಮಗಾರಿಗಳನ್ನು ಸರ್ಕಾರ ಕೈಗೊಳ್ಳಬೇಕಿದೆ ಎಂದು ರೈತರು ಹಾಗೂ ರೈತಪರ ಸಂಘಗಳು ಆಗ್ರಹಿಸಿದ್ದವು. ಇದಕ್ಕೆ ಮಣಿದು ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿದೆ.
ರೈತರಿಗೆ ಇಂತಹ ಸಂಕಷ್ಟದಲ್ಲಿ ನೆರವು ನೀಡುವತ್ತ ಸಹಕಾರಿ ಆಗಲು ಶಾಶ್ವತ ಠೇವಣಿ ಇಡುವಂತಹ ಕೆಲಸ ಸರ್ಕಾರದಿಂದ ಆಗಬೇಕಿದೆ. ಇದರಿಂದ ಬೇಗ ಪರಿಹಾರ ದೊರೆಯಲು ಸಹಕಾರಿ ಆಗಲಿದೆ. ಇನ್ನು ರಾಜ್ಯ ಸರ್ಕಾರವು ರೈತರ ಸಂಕಷ್ಟಕ್ಕೆ ಧಾವಿಸುವ ಕೆಲಸ ಮಾಡಬೇಕಿದೆ. ಮುಂಗಾರು ಮಳೆಯಿಲ್ಲದೇ ಬೆಳೆ ಕಳೆದುಕೊಂಡು ರೈತರ ಸಂಕಷ್ಟ ಅರಿಯದ ಬ್ಯಾಂಕ್‌ಗಳು ಸಾಲ ವಸೂಲಾತಿಯಲ್ಲಿ ತೊಡಗಿವೆ. ಹೀಗಾಗಿ ಸಾಲ ಮನ್ನಾ ಮಾಡುವ ದಿಟ್ಟ ನಿರ್ಧಾರವನ್ನು ಸರ್ಕಾರ ಪ್ರಕಟಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರದ ಆದೇಶದಲ್ಲೇನಿದೆ?: ರೈತರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೊನೆಗೂ ಬರ ಘೋಷಣೆ ಮಾಡಿದೆ. 161 ತಾಲೂಕುಗಳನ್ನು ತೀವ್ರ ಮತ್ತು 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕುಗಳೆಂದು ಘೋಷಿಸಿ ಆದೇಶ ಹೊರಡಿಸಿದೆ. 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಇದರಲ್ಲಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳು ಹಾಗೂ 34 ಸಾಧಾರಣ ಬರಪೀಡಿತ ತಾಲೂಕುಗಳು ಎಂದು ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಆರು ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಘೋಷಿಸಲಾಗಿದೆ.
ಇದನ್ನೂ ಓದಿ: ಬರ ಘೋಷಣೆ: 161 ತೀವ್ರ, 34 ಸಾಧಾರಣ ಬರಪೀಡಿತ ತಾಲೂಕುಗಳು- ರಾಜ್ಯ ಸರ್ಕಾರ ಆದೇಶ