ಬಳ್ಳಾರಿ: ನಗರದ ಹೊರವಲಯದ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಆಡಳಿತ ವಿಭಾಗದ ಮುಂದೆ ಸಂಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಸ್ಯೆ ಹಾಗೂ ಘಟಿಕೋತ್ಸವ ಶುಲ್ಕ ಹೆಚ್ಚಳ ಮತ್ತು ಹಾಸ್ಟೆಲ್ ಸಮಸ್ಯೆಗಳ ಕುರಿತು ಕುಲಪತಿ ಮತ್ತು ಉಪಕುಲಪತಿ ವಿರುದ್ಧ ಪ್ರತಿಭಟನೆ ಮಾಡಿದರು.
ಈಟಿವಿ ಭಾರತದೊಂದಿಗೆ ಎಬಿವಿಪಿ ಸಂಘಟನೆಯ ಬಳ್ಳಾರಿ ಜಿಲ್ಲಾ ಸಂಚಾಲಕ ಯುವರಾಜ್ ಮಾತನಾಡಿ, ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವ ಸಂಡೂರು ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 10 ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಮತ್ತು ವಿಶ್ವವಿದ್ಯಾಲಯ ಪರೀಕ್ಷೆ ಬರೆಯಲು ಅನುಮತಿ ನೀಡಿಲ್ಲ. ಹೀಗಾಗಿ 10 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಆ ವಿದ್ಯಾರ್ಥಿಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
2,750 ರೂ. ಘಟಿಕೋತ್ಸವ ಶುಲ್ಕವನ್ನು ತುಂಬಿಸಿಕೊಂಡಿದ್ದಾರೆ. ರಾಜ್ಯದ ಯಾವ ವಿಶ್ವವಿದ್ಯಾಲಯದಲ್ಲಿ ಇಲ್ಲದ ಶುಲ್ಕವನ್ನು ವಿದ್ಯಾರ್ಥಿಗಳಿಂದ ತುಂಬಿಸಿಕೊಂಡಿದ್ದಾರೆ. ಆ ಹಣವನ್ನು ತಕ್ಷಣವೇ ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಬೇಕು ಎಂದು ಆಗ್ರಹಿಸಿದರು.
ವಿಶ್ವವಿದ್ಯಾಲಯ ಆವರಣದಲ್ಲಿರುವ ಹಾಸ್ಟೆಲ್ ಅವ್ಯವಸ್ಥೆ ಆಗರವಾಗಿದೆ. ಅದನ್ನು ಬದಲಿಸಿ ವಿದ್ಯಾರ್ಥಿಗಳಿಗೆ ಉತ್ತಮ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು.
ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೇ ಫೆಬ್ರವರಿ 26 ರಂದು ಬಳ್ಳಾರಿ ವಿ.ವಿ ಚಲೋ ಬೃಹತ್ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಎಬಿವಿಪಿ ಸಂಘಟನೆ ವಿವಿಯ ಉಪಕುಲಪತಿ ಮತ್ತು ಕುಲಸಚಿವೆಗೆ ಎಚ್ಚರಿಕೆ ನೀಡಿದರು.