ಬಳ್ಳಾರಿ: ಸಂಡೂರು ತಾಲೂಕಿನ ತೋರಣಗಲ್ನಲ್ಲಿರುವ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಹೊಸದಾಗಿ 43 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಕಾರ್ಖಾನೆಯೊಂದರಲ್ಲೇ ಈವರೆಗೆ 86 ಪ್ರಕರಣಗಳು ಕಂಡುಬಂದಿವೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಈ ಕುರಿತು ಮಾತನಾಡಿದ ಅವರು, ಜಿಂದಾಲ್ನ ಕೊರೆಕ್ಸ್ ಹಾಗೂ ಒಪಿಜೆ ಸೆಂಟರ್ನ ಎರಡೂ ಘಟಕಗಳಲ್ಲಿ ನೌಕರರಿಗೆ ಮುಂದಿನ ಏಳು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ. ಈ ಅವಧಿ ಮುಗಿದ ನಂತರ ಅವರ ಸ್ವ್ಯಾಬ್ ಟೆಸ್ಟ್ ಮಾಡಲಾಗುವುದು. ಆ ವರದಿ ಆಧಾರದ ಮೇಲೆ ಆ ನೌಕರರನ್ನ ಕೆಲಸ ಮಾಡಿಸುವುದೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು. ಉಳಿದಂತೆ ವರ್ಕ್ ಫ್ರಮ್ ಹೋಂ ಪದ್ಧತಿಯನ್ನೂ ಕೂಡ ಜಾರಿಗೆ ತರಲು ಜಿಂದಾಲ್ ಉಕ್ಕು ಕಾರ್ಖಾನೆಯ ಮಾಲೀಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿ ರಣಕೇಕೆ ಹಾಕುತ್ತಿದ್ದು, ಇಲ್ಲಿಯವರೆಗೆ ಈ ಕಾರ್ಖಾನೆಯೊಂದರಲ್ಲೇ 86 ಕೇಸ್ಗಳು ಪತ್ತೆಯಾಗಿವೆ.