ವಿಜಯನಗರ : ಕಳೆದ ಕೆಲವು ದಿನಗಳ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ವಂಚಿಸಿದ್ದ ಪ್ರಕರಣ ಸಂಬಂಧ ಚೈತ್ರಾ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಇದರ ಬೆನ್ನಲ್ಲೇ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 2.5 ಕೋಟಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಬಿಜೆಪಿ ಮಾಜಿ ಮುಖಂಡರೊಬ್ಬರ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ನಿವೃತ್ತ ಪಿಡ್ಲ್ಯೂಡಿ ಇಂಜಿನಿಯರ್ ಶಿವಮೂರ್ತಿ ವಂಚನೆಗೊಳಗಾದ ವ್ಯಕ್ತಿ.
''ಬಿಜೆಪಿ ಮಾಜಿ ಮುಖಂಡ ಹಾಗೂ ಪುತ್ತೂರು ಮೂಲದ ವ್ಯಕ್ತಿಯೊಬ್ಬರು 2.5 ಕೋಟಿ ರೂ ಪಡೆದು ವಂಚನೆ ಮಾಡಿದ್ದಾರೆ. ಇದೀಗ ಹಣ ವಾಪಸ್ ಕೊಡುವಂತೆ ಕೇಳಿದ್ದಕ್ಕೆ ವಂಚಕರು ಬೆದರಿಕೆ ಹಾಕುತ್ತಿದ್ದಾರೆ'' ಎಂದು ಶಿವಮೂರ್ತಿ ಆರೋಪಿಸಿದ್ದಾರೆ. ಈ ಸಂಬಂಧ ಶಿವಮೂರ್ತಿ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ ಎಸ್.ಸಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಪುತ್ತೂರು ಮೂಲದ ವ್ಯಕ್ತಿ ಹಣ ಪಡೆದು ವಂಚಿಸಿದ್ದಾರೆ ಎಂದು ಶಿವಮೂರ್ತಿ ಹೇಳಿದ್ದಾರೆ.
ಚುನಾವಣೆಗೂ ಮುನ್ನ ಬಿಜೆಪಿ ಟಿಕೆಟ್ ಸಿಗಬೇಕು ಎಂದರೆ ಕೋಟಿಗಟ್ಟಲೇ ಹಣ ನೀಡಬೇಕು ಎಂದು ತಂಡ ಹೇಳಿದೆ. ಬಳಿಕ ಶಿವಮೂರ್ತಿ ಅವರಿಂದ ಹಂತ ಹಂತವಾಗಿ ಬರೋಬ್ಬರಿ 2.5 ಕೋಟಿ ಹಣವನ್ನು ಪಡೆದಿದೆ. ಇದರಲ್ಲಿ ಪುತ್ತೂರು ಮೂಲದ ವ್ಯಕ್ತಿ 90 ಲಕ್ಷ ಪಡೆದಿದ್ದು, ಬಿಜೆಪಿ ಮುಖಂಡ ಮತ್ತು ಸಂಗಡಿಗರು ಒಂದು ಕೋಟಿ ರೂ. ಪಡೆದಿದ್ದಾರೆ ಎಂದು ಶಿವಮೂರ್ತಿ ದೂರಿದ್ದಾರೆ.
ಬಳಿಕ ಹಗರಿಬೊಮ್ಮನಹಳ್ಳಿ ಬಿಜೆಪಿ ಟಿಕೆಟ್ ಬಲ್ಲಾಹುಣ್ಸಿ ರಾಮಣ್ಣಗೆ ಘೋಷಣೆ ಆಗಿತ್ತು. ಇದರಿಂದ ಮೋಸ ಹೋಗಿರುವ ಬಗ್ಗೆ ತಿಳಿದ ಶಿವಮೂರ್ತಿ ಕೊಟ್ಟ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಆಗ ಬಿಜೆಪಿ ಮಾಜಿ ಮುಖಂಡ ಹಾಗೂ ಅವರ ಗ್ಯಾಂಗ್ ಬೆದರಿಕೆ ಹಾಕಿದೆ ಎಂದು ಶಿವಮೂರ್ತಿ ದೂರಿದ್ದಾರೆ. ಪುತ್ತೂರು ಮೂಲದ ವ್ಯಕ್ತಿ 50 ಲಕ್ಷ ರೂಪಾಯಿಗಳ ಒಂದು ಚೆಕ್, 22 ಲಕ್ಷದ ಇನ್ನೊಂದು ಚೆಕ್‌ನ್ನು ಕೊಟ್ಟಿದ್ದ. ಈ ಚೆಕ್‌ನ್ನು ಬ್ಯಾಂಕ್‌ನಲ್ಲಿ ಕೊಟ್ಟಾಗ ಎರಡು ಬಾರಿ ಚೆಕ್‌ಗಳು ಬೌನ್ಸ್ ಆಗಿದೆ ಎಂದು ಕೊಟ್ಟೂರು ಠಾಣೆಯಲ್ಲಿ ಶಿವಮೂರ್ತಿ ದೂರು ನೀಡಿದ್ದಾರೆ.
ಇದನ್ನೂ ಓದಿ : ಹೆಚ್.ಡಿ.ರೇವಣ್ಣ ಆಪ್ತನ ಮೇಲೆ ದಾಳಿ ಪ್ರಕರಣ: ಪೊಲೀಸ್ ಅಧಿಕಾರಿ ಸೇರಿ ಆರು ಮಂದಿ ಬಂಧನ