ಬಳ್ಳಾರಿ : ಫೆ.2020 ರಿಂದ ಜ.2021ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿ 14,398 ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥ ತಿಳಿಸಿದರು.
ನಗರದ ಬಿಡಿಎಎ ಸಭಾಂಗಣದಲ್ಲಿಇಂದು ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಬಳ್ಳಾರಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಮಂಜುನಾಥ ಅವರು ಮೊದಲನೇ ಬಾರಿಗೆ ಮತದಾನ ಮಾಡುವ ಕಾಲೇಜ್ ವಿದ್ಯಾರ್ಥಿಗಳಿಗೆ (ಯುವಕ ಮತ್ತು ಯುವತಿಯರಿಗೆ) ಗುರುತಿನ ಚೀಟಿ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಚುನಾವಣೆಯ ಸಮಯದಲ್ಲಿ ನಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ನಾವು ಸಕ್ರಿಯವಾಗಿ ಭಾಗಿಯಾಗಿದಾಗ ಮಾತ್ರ ಪ್ರಜೆಗಳೇ ಪ್ರಭುಗಳಾಗಲು ಸಾಧ್ಯ. ಹಾಗೇ ಪ್ರಜಾಪ್ರಭುತ್ವ ಅರ್ಥಪೂರ್ಣವಾಗಿರುತ್ತದೆ.
ಯುವ ಮತದಾರರನ್ನು ಹೆಚ್ಚಾಗಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸುವ ಮೂಲಕ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಚುನಾವಣೆ ಪ್ರಕ್ರಿಯೆಗೆ ಸಕ್ರಿಯವಾಗಿ ಭಾಗವಹಿಸಲಿ ಎನ್ನುವ ಉದ್ದೇಶದಿಂದ ಈ ರಾಷ್ಟ್ರೀಯ ಮತದಾರರ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚು ವಿದ್ಯಾವಂತ ಯುವ ಮತದಾರರು ಹೆಚ್ಚಾಗಿರುವ ಸ್ಥಳದಲ್ಲಿ ಮತದಾನದ ಪ್ರಮಾಣ ಕಡಿಮೆ ಇದೆ. ಇದಕ್ಕೆ ಕಾರಣ ಯುವಕರು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೆ ಇರುವುದು. ಕಳೆದ 10 ರಿಂದ 15 ವರ್ಷಗಳಲ್ಲಿ ಯುವ ಮತದಾರರು ಚುನಾವಣೆಯಲ್ಲಿ ಭಾಗವಹಿಸುವಲ್ಲಿ ರಾಷ್ಟ್ರೀಯ ಮತದಾರನ ದಿನಾಚರಣೆ ಕೆಲಸ ಮಾಡಿದೆ ಎಂದರು.
ಈ ವೇಳೆ ಆಯುಕ್ತರಾದ ರಮೇಶ್ ಕೋನಾರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಬಳ್ಳಾರಿ ಜಿಲ್ಲಾ ವರಿಷ್ಠಾಧಿಕಾರಿ ಸೈದುಲು ಅಡಾವತ್, ನ್ಯಾಯಾಧೀಶ ಅರ್ಜುನ್ ಮಲ್ಲೂರು ಮತ್ತು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.