ಹೊಸಪೇಟೆ: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕೊರೊನಾ ತಡೆಗಟ್ಟಲು ಜಾಗೃತಿ ವಹಿಸಲಾಗಿದೆ. ಹೊಸಪೇಟೆಯಲ್ಲಿ ಲೋಕೋ ಪೈಲಟ್ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಈಗ ನಿಯಂತ್ರಣಕ್ಕೆ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಎಲ್. ಜನಾರ್ದನ ಹೇಳಿದರು.
ನಗರದಲ್ಲಿಂದು ತಾಲೂಕು ವೈದ್ಯಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸಪೇಟೆಯಲ್ಲಿ ಈ ಮುಂಚೆ 56 ಸಕ್ರಿಯ ಪ್ರಕರಣಗಳು ಇದ್ದವು. ಈಗ 28ಕ್ಕೆ ಇಳಿದಿವೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ 129 ಸಕ್ರಿಯ ಪ್ರಕರಣಗಳಿವೆ. ಈ ಎರಡು ಜಿಲ್ಲೆಗಳಲ್ಲಿ ಮೂರು ಸಾವಿರಕ್ಕಿಂತ ಹೆಚ್ಚು ಸ್ವ್ಯಾಬ್ ಟೆಸ್ಟ್ಗಳನ್ನು ಮಾಡಲಾಗುತ್ತಿದೆ ಎಂದರು.
ಇದನ್ನು ಓದಿ: ಅನಿಲ್ ದೇಶಮುಖ್ ರಾಜೀನಾಮೆ ವಿಚಾರ ಉದ್ಧವ್ ಠಾಕ್ರೆ ವಿವೇಚನೆಗೆ ಬಿಟ್ಟದ್ದು: ಹೆಚ್.ಕೆ. ಪಾಟೀಲ್
ಕರ್ನಾಟಕದಲ್ಲಿ ಕೊರೊನಾ ಶೇ 1.7 ರಷ್ಟು ಇದೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಶೇ 0.4ರಷ್ಟು ಇದೆ. ಜಿಲ್ಲೆಗಳಲ್ಲಿ 75 ಸಾವಿರಕ್ಕಿಂತ ಹೆಚ್ಚು ಕೋವಿಡ್ ಲಸಿಕೆ ಹಾಕಲಾಗಿದೆ. 2 ಲಕ್ಷ ಲಸಿಕೆ ಹಾಕಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.