ಚಿಕ್ಕೋಡಿ : ಕಳೆದ ಬಾರಿ ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ರಾಜಕಾರಣಿಗಳ ಬಿಟ್ಟಿ ಮಾತು ಕೇಳುತ್ತಾ ಕುಳಿತ ಪ್ರವಾಹ ಪೀಡಿತರು ಇನ್ನೂ ಮುರುಕಲು ಮನೆಯಲ್ಲಿರುವ ಸ್ಥಿತಿ ಇದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಹಿರಣ್ಯಕೇಶಿ ನದಿಯ ಅಬ್ಬರಕ್ಕೆ ಇಲ್ಲಿರುವ ಲಕ್ಷ್ಮಿಬಾಯಿ ಗುಂಡಪೆ ಎಂಬ ವೃದ್ಧೆಯ ಮನೆ ಕುಸಿದಿತ್ತು. ಅಂದಿನಿಂದ ಈವರೆಗೆ ಈ ಮಹಿಳೆ ಅದೇ ಮುರುಕಲು ಮನೆಯಲ್ಲಿ ಇವರು ವಾಸಿಸುತ್ತಿದ್ದಾರೆ. ಸರ್ಕಾರ ಎ, ಬಿ, ಸಿ, ಕೆಟಗೆರಿಯಲ್ಲಿ ಮನೆ ನಿರ್ಮಿಸುವುದಾಗಿ ಹೇಳಿತ್ತು. ಕಂದಾಯ ಇಲಾಖೆ ಸರ್ವೆ ಕೂಡ ಮಾಡಿತ್ತು.
ಅದೇ ಪ್ರಕಾರ ಮನೆ ಕಳೆದುಕೊಂಡು ವೃದ್ಧೆ ಪಟ್ಟಣದ ಪುರಸಭೆಗೆ ಎರಡು ಬಾರಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರು. ಆದರೆ, ಇನ್ನೂ ಯಾವುದೇ ಅಧಿಕಾರಿಗಳು ಮಾತ್ರ ಭೇಟಿ ನೀಡಿ ಸಂತ್ರಸ್ತೆಯ ಅರ್ಜಿ ಬಗ್ಗೆ ವಿಚಾರಿಸಿಲ್ಲ. ಒಬ್ಬಂಟಿಯಾಗಿರುವ ಇವರು ಮಳೆ ಬಂದ್ರೆ ಬೇರೆಯವರ ಮನೆ ಆಶ್ರಯಿಸಬೇಕಾಗಿದೆ. ಇನ್ನಾದ್ರೂ ಅಧಿಕಾರಿಗಳು ಈ ವೃದ್ಧಿಯ ನೆರವಿಗೆ ಬರಬೇಕಾಗಿದೆ.