ಬೆಳಗಾವಿ: ಪ್ರವಾಹದಿಂದ ಬೆಳಗಾವಿ ಜಿಲ್ಲೆಯ ಜನರ ಬದುಕು ಬೀದಿಗೆ ಬಂದರೂ ಸಿಎಂ ಸ್ಪಂದಿಸುತ್ತಿಲ್ಲ. ಅಧಿಕಾರ ಅನುಭವಿಸಲಷ್ಟೇ ಯಡಿಯೂರಪ್ಪ ಸಿಎಂ ಆಗಿದ್ದಾರೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಂತರಿಕ ಸಮಸ್ಯೆಗಳೇ ಹೆಚ್ಚಾಗಿವೆ. ಪ್ರವಾಹ ಸಂತ್ರಸ್ತರ ನೆರವಿಗೆ ದಾವಿಸಲು ಯಡಿಯೂರಪ್ಪಗೆ ಸಮಯ ಸಿಗುತ್ತಿಲ್ಲ. ಕೇವಲ ರಾಜಕೀಯ ಮಾಡಿಕೊಂಡು ಅಧಿಕಾರ ಅನುಭವಿಸುತ್ತಿದ್ದಾರೆ. ಪ್ರವಾಹದಿಂದ ಜನರ ಬದುಕು ಬೀದಿಗೆ ಬಂದರೂ ಸಿಎಂ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ವಿಚಾರಣೆ ಇರುವ ಕಾರಣ ಸಿಎಂ ಟೆನ್ಷನ್ನಲ್ಲಿದ್ದಾರೆ. ಸರ್ಕಾರ ಏನಾಗುತ್ತೆ ಎಂಬ ಆತಂಕ ಅವರಿಗಿದೆ. ಅನರ್ಹ ಶಾಸಕರೆಲ್ಲರೂ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಎಂದರು.
ಬಿಜೆಪಿ ಶ್ರಮ ಪಟ್ಟು ಅಧಿಕಾರಕ್ಕೆ ಬಂದಿಲ್ಲ, ಹೀಗಾಗಿ ಜನರ ಕಷ್ಟ ಅವರಿಗೆ ಅರಿವಾಗುತ್ತಿಲ್ಲ. ಸರ್ಕಾರದ ಗಮನ ಸೆಳೆಯಲೆಂದೇ ನಾಳೆ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಸುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ ಸೇರಿದಂತೆ ಮಾಜಿ ಸಚಿವರು, ಶಾಸಕರು ಹಾಗೂ ಮಾಜಿ ಶಾಸಕರು ಭಾಗವಹಿಸಲಿದ್ದಾರೆ. ಡಿಸಿ ಕೂಡ ನಮ್ಮ ಸಮಾವೇಶಕ್ಕೆ ಲಿಖಿತ ರೂಪದಲ್ಲಿ ಅನುಮತಿ ನೀಡಿದ್ದಾರೆ. ಕಾಂಗ್ರೆಸ್ ಭವನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಬಳಿಕ ಡಿಸಿ ಕಚೇರಿ ಮುಂದೆ ಸಭೆ ನಡೆಯಲಿದ್ದು, 25 ಸಾವಿರಕ್ಕೂ ಅಧಿಕ ಜನರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.