ಬೆಳಗಾವಿ: ರಾಜ್ಯ, ದೇಶದಲ್ಲಿ ಶೌಚಾಲಯ ಮಾನವ ಬಳಕೆಯ ಮೂಲಕ ಸ್ವಚ್ಛಗೊಳಿಸುವ ಪದ್ಧತಿ ನಿವಾರಣೆಗೆ ಸರ್ಕಾರ ಸಕಲ ರೀತಿಯಲ್ಲೂ ಪ್ರಯತ್ನ ನಡೆಸಿದೆ ಎಂದು ವಿಧಾನ ಪರಿಷತ್ ಸಭಾನಾಯಕ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ನಿಯಮ 72ರ ಅಡಿ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ,ಶೌಚಾಲಯ ಸ್ವಚ್ಛತೆಗಾಗಿ ಯಂತ್ರ ಬಳಸಿ ಮನುಷ್ಯರನ್ನು ಬಳಸಬೇಡಿ ಎಂದರೂ ಇಂದಿಗೂ ಆ ಸ್ಥಿತಿ ಬದಲಾಗಿಲ್ಲ. ಇದನ್ನು ತಡೆಯಲು ಕಠಿಣ ಕ್ರಮ ಆಗಬೇಕು. ಶೌಚಾಲಯ ಸ್ವಚ್ಛಗೊಳಿಸುವಾಗ ಸತ್ತವರೆ ಸುಮಾರು 400 ಮಂದಿ ಇದ್ದಾರೆ. ಆದರೆ ಸರ್ಕಾರದ ಲೆಕ್ಕ 40ನ್ನು ಮೀರಲ್ಲ. ಅಮಾನವೀಯ ಕೃತ್ಯ ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವಾಗ ಇವರಿಗೆ ಸೂಕ್ತ ನ್ಯಾಯ ಒದಗಿಸಬೇಕು. ಗೃಹ ಸಚಿವರು ಈ ಕಲಾಪ ಮುಕ್ತಾಯವಾಗುವ ಮುನ್ನವೇ ಒಂದು ಸೂಕ್ತ ಕಾನೂನು ರೂಪಿಸಬೇಕು. ಜಾತಿ, ಧರ್ಮದ ಹೆಸರನ್ನು ಹೇಳಿ ಜನರನ್ನು ಅವಮಾನಿಸುವ ಕಾರ್ಯ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಭಾರತ ಸರ್ಕಾರವು 2013ರಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಅವರ ಮನರ್ವಸತಿ ಕಾಯ್ದೆ ಅಧಿನಿಯಮ 2013ರ ಕಾಯ್ದೆ ಹಾಗೂ ನಿಯಮಗಳನ್ನು ರೂಪಿಸಿ ಜಾರಿಗೆ ತರಲಾಗಿದೆ. ಅದರಂತೆ ರಾಜ್ಯ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಎಂಎಸ್ ಕಾಯ್ದೆ 2013ನ್ನು ರಾಜ್ಯದಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್‌ನಲ್ಲಿ ತೊಡಗಿರುವವರನ್ನು ಕಾಯ್ದೆಯ ನಿಯಮಗಳ ಅನುಸಾರ 5,080 ಜನರನ್ನು ಗುರುತಿಸಲಾಗಿರುತ್ತದೆ. ಗುರುತಿಸಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಿಗೆ ಮನರ್ವಸತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಗಿರುತ್ತದೆ. ಒಂದು ನಗದು, ಸಹಾಯಧನವಾಗಿ ರೂ.40,000 ಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ. ರಾಜ್ಯ ಸರ್ಕಾರದ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಸಾಲಸಹಾಯಧನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮ್ಯಾನ್‌ಹೋಲ್ ಸ್ವಚ್ಛಗೊಳಸುವಾಗ ಮೃತಪಟ್ಟಲ್ಲಿ ಸಂಬಂಧಿಸಿದ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಸಲಾಗುತ್ತಿದೆ. ಮೃತಪಟ್ಟ ಕುಟುಂಬದ ಅವಲಂಬಿತರಿಗೆ ರೂ.10,00,000 ಪರಿಹಾರ ಧನವನ್ನು ನೀಡಲಾಗುತ್ತಿದೆ. 1993 ರಿಂದ ಈವರೆಗೆ 88 ಕುಟುಂಬಗಳಿಗೆ ಪರಿಹಾರಧನ ನೀಡಲಾಗಿದೆ. ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ನಿರ್ಮೂಲನೆ ಮಾಡಲು ರಾಜ್ಯ ಸರ್ಕಾರವು ವಿಶೇಷವಾದ ಕ್ರಿಯಾಯೋಜನೆ ರೂಪಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಲಾಗಿದೆ. ಮ್ಯಾನ್‌ಹೋಲ್ ಸೆಪ್ಟಿಕ್ ಟ್ಯಾಂಕ್ ಹಾಗೂ ತೆರೆದ ಚರಂಡಿ ಗಟಾರಗಳನ್ನು ಸ್ವಚ್ಛಗೊಳಿಸಲು ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಉಪಯೋಗಿಸಲಾಗುತ್ತಿದೆ. ಈವರೆಗೂ ನಗರಾಭಿವೃದ್ಧಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಈ ಕೆಳಗಿನ ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಖರೀದಿಸಿ ಉಪಯೋಗಿಸಲಾಗುತ್ತಿದೆ ಎಂದು ವಿವರಿಸಿದರು.
ಅಂಕಿ-ಅಂಶ ಸಮೇತ ಮಾಹಿತಿ ನೀಡಿದ ಅವರು ಸಕ್ಲಿಂಗ್ ಮಷಿನ್ -177, ಜಟ್ಟಿಂಗ್ ಮಷಿನ್ -295, ಸಕ್ಕಿಂಗ್ ಕಮ್ ಜೆಟ್ಟಿಂಗ್ ಮೆಷಿನ್ -132, ಡೀಸಾಲ್ಟಿಂಗ್-50, ರಾಡರಿಂಗ್ ಯಂತ್ರ-28 ಇತರೆ ಸಚ್ಛಗೊಳಿಸುವ 13 ಯಂತ್ರಗಳನ್ನು ಒದಗಿಸಲಾಗಿದೆ. ರಾಜ್ಯದಲ್ಲಿ ಈ ಹಿಂದೆ ಇದ್ದ ಒಟ್ಟು 30,341 ಅನೈರ್ಮಲ್ಯ, ಶೌಚಾಲಯಗಳನ್ನು ತೆರವುಗೊಳಸಿ ನೈರ್ಮಲ್ಯ ಶೌಚಾಲಯಗಳನ್ನಾಗಿ ಪರಿವರ್ತಿಸಲಾಗಿದೆ ಎಂದರು.
ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ ಮತ್ತು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಇವರುಗಳು ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಬಗ್ಗೆ ಕಾನೂನಿನ ಕುರಿತು ಅರಿವು ಮೂಡಿಸುವ ಮತ್ತು ಮನರ್ವಸತಿ ಕಲ್ಪಸುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತವೆ. ರಾಜ್ಯ ಮಟ್ಟದಲ್ಲಿ ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲ ಸಫಾಯಿ ಕರ್ಮಚಾರಿಗಳ ಸಮುದಾಯದ ಪ್ರತಿನಿಧಿಗಳನ್ನು ಹಾಗೂ ಅನುಷ್ಠಾನ ಇಲಾಖೆಗಳನ್ನು ಒಳಗೊಂಡಂತೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಸದರಿ ಸಮಿತಿಯ ಪ್ರತಿ 5 ತಿಂಗಳಿಗೊಮ್ಮೆ ಸಭೆ ಸೇರಿ, ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ನಿರ್ಮೂಲನೆಗೊಳಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂಬ ಮಾಹಿತಿ ನೀಡಿದರು.
ಇದನ್ನೂ ಓದಿ: ನಾಳೆ ಪರಿಷತ್ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳಲ್ಲಿ ಡವ.. ಡವ.