ಅಥಣಿ: ರಾಜಕೀಯದಲ್ಲಿ ಸೋಲು ಹೆಲುವು ಇದ್ದದ್ದೇ. ಆದರೆ ಸೋಲಿನಿಂದ ಕುಗ್ಗುವುದು ಬೇಡ, ಈ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಚುನಾವಣೆಗೆ ಗೆಲುವಿನ ಮೆಟ್ಟಿಲಾಗಿ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಆತ್ಮಸ್ಥೈರ್ಯ ತುಂಬಿದರು.
ಕಾಂಗ್ರೆಸ್ ಅಭ್ಯರ್ಥಿ ಆಗಿ ಸ್ಪರ್ಧಿಸಿದ್ದ ಗಜಾನನ ಮಂಗಸೂಳಿ ಪರ ಮತದಾರರ ಅಭಿನಂದನೆ ಹಾಗೂ ಆತ್ಮಾವಲೋಕನ ಸಭೆ ಕಾರ್ಯಕ್ರಮವನ್ನು ಅಥಣಿ ಪಟ್ಟಣದ ಶಿವಣಗಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಕಳೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಹಣಬಲ ಮತ್ತು ತೋಳ್ಬಲದಿಂದಲೇ ಬಿಜೆಪಿ ತನ್ನ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರನ್ನು ಗೆಲ್ಲಿಸಿದ್ದು ಹಾಗೂ ನೆರೆ ಬಂದ ಸಂದರ್ಭದಲ್ಲಿ ಕೃಷ್ಣಾ ನದಿ ಪ್ರವಾಹಪೀಡಿತರ ಸಂಕಷ್ಟ ಆಲಿಸಲು ಸೌಜನ್ಯಕ್ಕೂ ಬಾರದ ಮಹೇಶ ಕುಮಠಳ್ಳಿ ಶಾಸಕರಾಗಿ ಆಯ್ಕೆ ಆಗಿದ್ದು ನಮ್ಮ ದುರದೃಷ್ಟ ಎಂದು ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು.
ಬಿಜೆಪಿ ಅಭ್ಯರ್ಥಿ ವಿರುದ್ದ ನೇರ ಹಣಾಹಣಿ ಏರ್ಪಟ್ಟ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರಾಭವಗೊಳ್ಳಲು ಏನು ಕಾರಣ ಅನ್ನುವ ವಿಷಯದ ಕುರಿತು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಸಭೆಯಲ್ಲಿ ಚರ್ಚೆ ನಡೆಸಿದರು.
ಕಾಂಗ್ರೆಸ್ ಪಕ್ಷದ ಆತ್ಮಾವಲೋಕನ ಕಾರ್ಯಕ್ರಮ ಅಭ್ಯರ್ಥಿಯ ಸೋಲಿನ ಕಾರಣಗಳ ಪರಾಮರ್ಶೆ ನಡೆಸುವಲ್ಲಿ ಸೀಮಿತವಾಗಿದ್ದಲ್ಲದೆ ಬಿಜೆಪಿ ಸರ್ಕಾರ ನೆರೆ ಸಂತ್ರಸ್ಥರ ನೋವಿಗೆ ಮತ್ತು ಸಂಕಷ್ಟಕ್ಕೆ ಸ್ಪಂದಿಸಲು ವಿಫಲವಾಗಿದ್ದು ಜನಪರ ಸರ್ಕಾರ ಕೊಡುವಲ್ಲಿ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬಂದವು. ನೂರಾರು ಕಾರ್ಯಕರ್ತರು ಮತ್ತು ಮುಖಂಡರಿದ್ದ ಈ ಕಾರ್ಯಕ್ರಮದಲ್ಲಿ ಅಥಣಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗಜಾನನ ಮಂಗಸೂಳಿ ಅವರ ತಂದೆ ಬಾಲಚಂದ್ರ ಮಂಗಸೂಳಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.