ಬೆಳಗಾವಿ: ರಸ್ತೆ ದುರಸ್ತಿಗೆ ಆಗ್ರಹಿಸಿ ಬುಡರಕಟ್ಟಿ ಗ್ರಾಮಸ್ಥರು ಧಾರವಾಡದಿಂದ ಬೈಲಹೊಂಗಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಬೆಳವಡಿ- ಧಾರವಾಡ ರಸ್ತೆ ದುರಸ್ತಿ ಮಾಡುವಂತೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದರು.
ಬೆಳವಡಿಯಿಂದ ಬುಡರಕಟ್ಟಿ ಹಾಗೂ ಅಲ್ಲಿಂದ ತಡಕೋಡವರೆಗಿನ ರಸ್ತೆ ಹದಗೆಟ್ಟು ವರ್ಷಗಳೇ ಕಳೆದಿವೆ. ವರ್ಷಗಳಿಂದ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಲಾಗುತ್ತಿದೆ. ಆದರೆ ಅಧಿಕಾರಿಗಳು ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಈ ಮಾರ್ಗದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ ಎಂದು ಜನತೆ ಆರೋಪಿಸಿದರು.
ರಸ್ತೆಯ ಎರಡೂ ಬದಿಗೆ ಹಗ್ಗ ಕಟ್ಟಿ ರಸ್ತೆ ಸಂಚಾರ ಬಂದ್ ಮಾಡಿದ ಗ್ರಾಮಸ್ಥರು ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸುವಂತೆ ಒತ್ತಾಯಿಸಿದರು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬೈಲಹೊಂಗಲ ತಹಶೀಲ್ದಾರ್ ಅವರು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಗ್ರಾಮಸ್ಥರು ಮಾತ್ರ ಪ್ರತಿಭಟನೆ ಕೈ ಬಿಡದೇ ಮುಂದುವರೆಸಿದ್ದಾರೆ. ಇದರಿಂದಾಗಿ ಧಾರವಾಡಕ್ಕೆ ತೆರಳುವ ಹಾಗೂ ಧಾರವಾಡದಿಂದ ಬೈಲಹೊಂಗಲಕ್ಕೆ ಬರುವ ಎಲ್ಲ ಬಸ್ ಸಂಚಾರ ಸ್ಥಗಿತಗೊಂಡಿದೆ. ಕೆಎಸ್ಆರ್ಟಿಸಿ ಬಸ್ ಸೇರಿದಂತೆ ಖಾಸಗಿ ವಾಹನಗಳು ಸಾಲುಗಟ್ಟಿ ನಿಂತಿವೆ.