ಬೆಳಗಾವಿ/ಬೆಂಗಳೂರು : ಈ ನೆಲ ಕಂಡ ಅದ್ಭುತ ನಟಿ ಲೀಲಾವತಿ ಅವರ ನಿಧನಕ್ಕೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಸಂತಾಪ ಹಾಗೂ ನುಡಿನಮನ ಸಲ್ಲಿಸಲಾಯಿತು.
ವಿಧಾನ ಪರಿಷತ್‌ನಲ್ಲಿ ಇಂದಿನ ಕಾರ್ಯಕಲಾಪ ಆರಂಭಿಸುವ ಮೊದಲು ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಪ್ರಾಣೇಶ್ ಸಂತಾಪ ಸೂಚನೆ ಮಂಡಿಸಿದರು. ಕನ್ನಡ ಚಲನಚಿತ್ರ ರಂಗದ ಅಭಿಜಾತ ಕಲಾವಿದೆ ಲೀಲಾವತಿ ಅವರು 2023ರ ಡಿಸೆಂಬರ್ 8ರಂದು ನಿಧನರಾದರು. 1938ರಲ್ಲಿ ಕರ್ನಾಟಕದ ಮಂಗಳೂರು ಜಿಲ್ಲೆಯ, ಬೆಳ್ತಂಗಡಿಯಲ್ಲಿ ಜನಿಸಿದ್ದ ಶ್ರೀಯುತರು ಸುಬ್ಬಯ್ಯನಾಯ್ಡು ಕಂಪನಿಯಲ್ಲಿ ಕಲಾವಿದೆಯಾಗಿ ಪಾತ್ರಗಳನ್ನು ನಿರ್ವಹಿಸಿ ರಂಗಭೂಮಿ ಕಲಾವಿದೆಯಾಗಿ ಪರಿಪಕ್ವಗೊಂಡ ಇವರು, 1949ರಲ್ಲಿ ನಾಗಕನ್ನಿಕೆ ಚಿತ್ರದ ಸಖಿ ಪಾತ್ರದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದ್ದರು. ಮಾಂಗಲ್ಯ ಯೋಗ ಚಿತ್ರದ ಮೂಲಕ ನಾಯಕಿ ನಟಿಯಾಗಿ ಬೆಳ್ಳಿ ಪರದೆ ಮೇಲೆ ರಾರಾಜಿಸಿದ್ದರು. ಕಡು ಬಡತನದಲ್ಲೇ ಬೆಳೆದು ಸಾಧನೆ ಮಾಡಿದ ಸಾಧಕಿ ಇವರು ಎಂದು ಬಣ್ಣಿಸಿದರು.
600ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ಅಭಿನಯಿಸಿದ ಶ್ರೀಯುತರು 400ಕ್ಕೂ ಹೆಚ್ಚು ಕನ್ನಡ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ, ತೆಲುಗು, ಮಲಯಾಳಂ, ತುಳು ಭಾಷೆಯ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಇವರು ಬಹುಭಾಷ ಕಲಾವಿದೆಯಾಗಿ ಬೆಳ್ಳಿಪರದೆಯಲ್ಲಿ ಮಿನುಗಿದ ನಕ್ಷತ್ರವಾಗಿದ್ದರು. ಐದು ದಶಕಗಳ ಸುದೀರ್ಘ ಬಣ್ಣದ ಲೋಕದಲ್ಲಿ ಅಪ್ರತಿಮ ಕಲಾವಿದೆಯಾಗಿ ಮೆರೆದ ಮೇರು ಪರ್ವತವಾಗಿದ್ದರು. ಚಿತ್ರರಂಗದ ಸೂಪರ್‌ಸ್ಟಾರ್‌ಗಳಾದ ಡಾ. ರಾಜ್ ಕುಮಾರ್, ಎನ್‌ಟಿಆರ್, ಎಎನ್‌ಆರ್, ತಮಿಳಿನ ಶಿವಾಜಿ ಗಣೇಶನ್, ಎಂಜಿಆರ್ ಅವರುಗಳ ಜೊತೆ ನಾಯಕಿ ನಟಿಯಾಗಿ ಅಭಿನಯಿಸಿದ ಇವರು ಮಾಡದ ಪಾತ್ರಗಳಿಲ್ಲ. 60ರ ದಶಕದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು.
ಮತ್ತೊಂದು ವಿಶೇಷವೆನೆಂದರೆ ಕನ್ನಡದ ಮೇರು ನಟರಾದ ಡಾ. ರಾಜ್‌ಕುಮಾರ್ ಅವರ ಚಲನಚಿತ್ರಗಳಲ್ಲಿ ಖಾಯಂ ನಟಿಯಾಗಿದ್ದರು. ಅವರ ಚಿತ್ರದ ಹಾಡುಗಳು ಎಂದೆಂದಿಗೂ ಜನಪ್ರಿಯವಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ. ಕುಲವಧು' ಸಿನಿಮಾದಲ್ಲಿ ಲೀಲಾವತಿಯವರು ನಟಿಸಿರುವ "ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ" ಎಂಬ ಹಾಡು ನಮ್ಮ ಸಮಾಜ ಯುಗಾದಿ ಆಚರಿಸುವಷ್ಟೂ ದಿನ ಕಣ್ಣ ಮುಂದೆ ಬಂದೇ ಬರುತ್ತದೆ. ಸ್ನೇಹಮಯಿ, ಮೃದು ಸ್ವಭಾವ, ಮಾತೃ ಹೃದಯಿ ವ್ಯಕ್ತಿತ್ವ ಹೊಂದಿದ್ದ ಇವರು ಸಮಾಜ ಸೇವೆಯಲ್ಲಿಯೂ ಎತ್ತಿದ ಕೈಯಾಗಿದ್ದರು. ಸೋಲದೇವನಹಳ್ಳಿಯಲ್ಲಿ ತಮ್ಮ ಸ್ವಂತ ಹಣದಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶು ಚಿಕಿತ್ಸಾ ಕೇಂದ್ರವನ್ನು ನಿರ್ಮಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ತಮ್ಮ ಜೀವನದ ಕೊನೆಯವರೆವಿಗೂ ಭೂ ತಾಯಿಯ ಸೇವೆ ಮಾಡಿದ ಮಣ್ಣಿನ ಮಗಳಾಗಿದ್ದರು.
ಮದುವೆ ಮಾಡಿ ನೋಡು, ಸಂತ ತುಕರಾಂ ಚಿತ್ರಗಳಲ್ಲಿನ ನಟನೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿ, ತುಂಬಿದಕೊಡ, ಮಹಾತ್ಯಾಗ, ಭಕ್ತಕುಂಬಾರ, ಸಿಪಾಯಿ ರಾಮು, ಗೆಜ್ಜೆಪೂಜೆ ಸಿನಿಮಾದ ನಟನೆಗಾಗಿ ರಾಜ್ಯ ಪ್ರಶಸ್ತಿ, ಡಾ. ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ, ಪೋಷಕ ನಟನೆಗಾಗಿ ಮೂರು ಬಾರಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರ ನಿಧನದಿಂದಾಗಿ ಕನ್ನಡ ಚಲನಚಿತ್ರ ರಂಗ ಬೆಳ್ಳಿಪರದೆಯ ಧ್ರುವತಾರೆಯೊಂದನ್ನು ಕಳೆದುಕೊಂಡಂತಾಗಿದೆ ಎಂದು ತಿಳಿಸಿದರು.
ನುಡಿನಮನ: ಇದೆ ವೇಳೆ, ವಿಧಾನ ಪರಿಷತ್ನ ನಾಯಕರಾದ ಎನ್.ಎಸ್ ಬೋಸರಾಜು ಅವರು ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಒಬ್ಬ ಮಹಿಳಾ ಕಲಾವಿದೆ 600 ಸಿನಿಮಾಗಳಲ್ಲಿ ನಟಿಸಿರುವುದು ಅತ್ಯಂತ ಮಹತ್ತರ ಸಾಧನೆಯಾಗಿದೆ. ಪ್ರತಿಯೊಂದು ಪಾತ್ರದಲ್ಲಿ ವಿಶಿಷ್ಟ ಚಾಪು ಮೂಡಿಸಿದ್ದಾರೆ. ಮೇರು ನಟ ಡಾ. ರಾಜಕುಮಾರ್ ಅವರ ಸಿನಿಮಾಗಳಲ್ಲಿ ಸಹ ಮನ ಮಿಡಿಯುವಂತೆ ನಟಿಸಿ ಅಭಿನಯ ಶಾರದೆಯಾಗಿ ಹೆಸರು ಮಾಡಿದ್ದಾರೆ ಎಂದು ಉಪಸಭಾಪತಿಗಳು ಸದನಕ್ಕೆ ತಿಳಿಸಿದರು.
ಬಿಜೆಪಿ ಸದಸ್ಯ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ನಟಿ ಲೀಲಾವತಿ ಅವರು ಶ್ರೇಷ್ಟ ನಟರೊಂದಿಗೆ ಅಭಿನಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರ ಪುತ್ರ ನಟ ವಿನೋದ ರಾಜುಕುಮಾರ ಅವರು ತಾಯಿ ಲೀಲಾವತಿ ಅವರನ್ನು ಆರೈಕೆ ಮಾಡಿದ ರೀತಿ ನಿಜಕ್ಕೂ ಅನುಕರಣೀಯ. ಉತ್ತಮ ಅಭಿನಯಕ್ಕಾಗಿ ಲೀಲಾವತಿಯವರು ಚಿತ್ರರಂಗದ ಎಲ್ಲ ಪುರಸ್ಕಾರಗಳನ್ನು ಪಡೆದುಕೊಂಡರು. ಅವರ ಬಾಲ್ಯದ ಹಾಗು ವೃತ್ತಿ ಜೀವನದ ಅನುಭವಗಳು ಮತ್ತು ಪಡೆದ ಪ್ರಶಸ್ತಿಗಳು ಇತಿಹಾಸದಲ್ಲಿ ಚಿರಕಾಲ ದಾಖಲಾಗಿ ಉಳಿಯಲಿದೆ ಎಂದು ತಿಳಿಸಿದರು.
ಸದಸ್ಯ ಉಮಾಶ್ರೀ ಮಾತನಾಡಿ, ನಟಿ ಲೀಲಾವತಿ ಅವರು ಚಿತ್ರರಂಗದ ತಾಯಿಯಾಗಿದ್ದಾರೆ. ಬಾಲ್ಯದಿಂದ ಕೊನೆಯ ಜೀವನದವರೆಗೂ ಸಂತಸ ಜೀವನ ನಡೆಸಿದ ಮಹಾತಾಯಿ. ಅವರು ಮಾಡದ ಪಾತ್ರಗಳೇ ಇಲ್ಲ. ಅವರು ಅಭಿಯನದ ಶೈಲಿ, ಕನ್ನಡ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ರೀತಿ ಅನನ್ಯವಾಗಿದೆ. ಅವರ ನಿಧನದಿಂದ ಮನಸಿಗೆ ನೋವಾಗಿದೆ. ತಾಯಿ ನಟಿ ಲೀಲಾವತಿ ಅವರಂತೆಯೇ ಅವರ ಮಗ ನಟ ವಿನೋದ ರಾಜಕುಮಾರ ಸಹ ಮಗುವಿನ ಹಾಗೆ ತಾಯಿಯನ್ನು ನೋಡಿ ಈ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಸಚಿವ ಕೆ.ಎಚ್.ಮುನಿಯಪ್ಪ ಅವರು ಮಾತನಾಡಿ, ಹಲವಾರು ತಲೆಮಾರುಗಳು ನೆನಪಿಡುವಂತಹ ಅತ್ಯುತ್ತಮ ನಟಿ ಲೀಲಾವತಿಯಾಗಿದ್ದಾರೆ. ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತಹ ಸಾಧನೆ ಮಾಡಿದ ಲೀಲಾವತಿ ಅವರನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡ ನಟ ವಿನೋದರಾಜಕುಮಾರ ನಮ್ಮ ಸಮಾಜಕ್ಕೆ ಮಾದರಿ ನಟರಾಗಿದ್ದಾರೆ. ರಾಜ್ಯ ಸರ್ಕಾರವು ಅವರ ಕುಟುಂಬದ ಕಷ್ಟ ನಷ್ಟಗಳಿಗೆ ಸ್ಪಂದಿಸಲಿದೆ ಎಂದ ತಿಳಿಸಿದರು.
ಇದನ್ನೂ ಓದಿ : ಹಣದ ಬದಲು ಅಕ್ಕಿ ವಿತರಿಸಲು ಕ್ರಮ ವಹಿಸಲಾಗುತ್ತದೆ: ಕೆ ಹೆಚ್ ಮುನಿಯಪ್ಪ