ಬೆಳಗಾವಿ: ಮುಂಬೈನಿಂದ ಬಂದಿರುವ 6 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ನಮ್ಮ ಏರಿಯಾವನ್ನು ಸೀಲ್ಡೌನ್ ಮಾಡಲಾಗಿದ್ದು, ನಮ್ಮ ಜೀವನಕ್ಕೆ ತೊಂದರೆಯಾಗಿದೆ. ಹಾಗಾಗಿ ಸೋಂಕಿತರನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ವಡಗಾವಿ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಡೋರ್ ಗಲ್ಲಿ, ವಡ್ಡರ ಗಲ್ಲಿ, ರೈತ ಗಲ್ಲಿ, ವಡಗಾವಿ ಮಾಧವಪುರ ನಿವಾಸಿಗಳು, ಡೋರ್ ಗಲ್ಲಿಗೆ 15 ದಿನಗಳ ಹಿಂದೆ ಮುಂಬೈನಿಂದ 6 ಜನರು ಬಂದಿದ್ದರು. ಈ ಪೈಕಿ 4 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅವರೀಗ ಗುಣಮುಖರಾಗಿ ಬರುತ್ತಿದ್ದಂತೆಯೇ ಮತ್ತಿಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದ್ದು, ಆ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ಇದರಿಂದ ಅಲ್ಲಿ ವಾಸಿಸುವ ಬೇರೆ ನಿವಾಸಿಗಳಿಗೆ ಕೂಡ ತೊಂದರೆ ಆಗುತ್ತಿದ್ದು, ಸೋಂಕಿತರನ್ನು ಸ್ಥಳಾಂತರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಸೋಂಕಿತರು ರಸ್ತೆಯಲ್ಲಿ ಎಲ್ಲೆಂದರಲ್ಲಿ ತಿರುಗಾಡುತ್ತಿದ್ದಾರೆ. ಹೀಗಾಗಿ ಅವರನ್ನು ಈ ಕೂಡಲೇ ಸ್ಥಳಾಂತರ ಮಾಡಬೇಕು. ಒಂದು ವೇಳೆ ಸ್ಥಳಾಂತರ ಮಾಡದೇ ಇದ್ರೆ ಸರ್ಕಾರವೇ ನಗರದ ಪ್ರತಿಯೊಂದು ಕುಟುಂಬಕ್ಕೂ ಅಗತ್ಯ ದಿನಸಿ ಕಿಟ್ಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.