ಬೆಳಗಾವಿ: ಟಿಪ್ಪರ್ ಮತ್ತು ಕಾರಿನ ಮಧ್ಯೆ ಅಪಘಾತದಲ್ಲಿ ಟಿಪ್ಪರ್ನ ಡೀಸೆಲ್ ಟ್ಯಾಂಕರ್ ಸ್ಫೋಟಿಸಿ ಹೊತ್ತಿಕೊಂಡ ಬೆಂಕಿಯಿಂದ ಇಬ್ಬರು ಸಜೀವ ದಹನವಾಗಿರುವ ಘಟನೆ ಬೆಳಗಾವಿ ತಾಲೂಕಿನ ದೇವಗಿರಿ-ಬಂಬರಗಾ ಕ್ರಾಸ್ ಬಳಿ ನಡೆದಿದೆ. ಮೃತರನ್ನು ಬಂಬರಗಾ ಗ್ರಾಮದ ಮೋಹನ್ ಮಾರುತಿ ಬೆಳ್ಗಾಂವಕರ್ (24), ಮಚ್ಚೆ ಗ್ರಾಮದ ಬಾಲಕಿ ಸಮಿಕ್ಷಾ ಡಿಯೇಕರ್ (12) ಎಂದು ಗುರುತಿಸಲಾಗಿದೆ.
ಸಂಬಂಧಿಕರ ಮದುವೆ ಮುಗಿಸಿಕೊಂಡು ರಾತ್ರಿ 10:30 ಬಂಬರಗಾ ಗ್ರಾಮಕ್ಕೆ ಬರುವಾಗ ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದೆ. ಬಂಬರಗಾ ಕ್ರಾಸ್ ಬಳಿ ಅಡ್ಡ ಬಂದ ಟಿಪ್ಪರ್‌ಗೆ ಕಾರು ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಟಿಪ್ಪರ್ನ ಡಿಸೇಲ್ ಟ್ಯಾಂಕ್ ಒಡೆದು ಬೆಂಕಿ ಹೊತ್ತಿ ಉರಿದಿದೆ. ಈ ವೇಳೆ ಕಾರಿನಲ್ಲಿದ್ದ ನಾಲ್ವರ ಪೈಕಿ ಇಬ್ಬರು ಸಜೀವ ದಹನವಾಗಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡ ಮತ್ತಿಬ್ಬರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳಾದ ಮಹೇಶ್ ಬೆಳಗಾಂವಕರ್ ಮತ್ತು ಸ್ನೇಹಾ ಬೆಳಗುಂದಕರ್ ಸದ್ಯ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಪಿವ್ಹಿ ಸ್ನೇಹಾ, ಎಸಿಪಿ ಮತ್ತು ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಬ್ಬರ ಮೃತದೇಹಗಳನ್ನು ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಟಿಪ್ಪರ್ ಡ್ರೈವರ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಸ್ನೇಹಿತನ ಹಣ ಕೊಡಿಸಲು ಹೋದ ವ್ಯಕ್ತಿಯ ಕೊಲೆ: ಆರೋಪಿ ಪರಾರಿ
ಹಿಂದಿನ ಪ್ರಕರಣ:- ಗೂಡ್ಸ್ ಟೆಂಪೋಗೆ ವಾಹನ ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡದ ಶಿರಾಡಿ ಘಾಟ್‌ನ ಗುಂಡ್ಯ ಕೆಂಪು ಹೊಳೆ ಸಮೀಪ ನಿನ್ನೆಯ ಬುಧವಾರ ನಡೆದಿತ್ತು. ಟೆಂಪೋಗೆ ಡಿಕ್ಕಿ ಹೊಡೆದು ವಾಹನ ಪರಾರಿಯಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತರು ಹಾಸನದ ನಿವಾಸಿಗಳಾಗಿದ್ದಾರೆ. ಅಪಘಾತದ ಪರಿಣಾಮ ವಾಹನ ಜಖಂಗೊಂಡಿದೆ.
ಇನ್ನು ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ ಸಂಭವಿಸಿ ಸ್ಥಳದಲ್ಲೇ ತಾಯಿ - ಮಗ ಇಬ್ಬರು ಸಾವನ್ನಪ್ಪಿರುವ ಘಟನೆ ಡಿ.04 ರಂದು ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.