ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ ಪ್ರವಾಸಿಗರು ನಿಸರ್ಗದ ಮಡಿಲಲ್ಲಿನ ಮಂಜಿನಾಟ ನೋಡಲು ಕಣಕುಂಬಿ ಅರಣ್ಯ ವ್ಯಾಪ್ತಿಯ ಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ.
ಹೌದು, ಕಣ್ಣು ಹಾಯಿಸಿದಲ್ಲೆಲ್ಲ ಹಚ್ಚಹಸಿರಿನ ಕಾಡು. ಭೂಮಿ-ಆಕಾಶ ಎರಡೂ ಒಂದಾದ ಭಾವ. ಬೆಟ್ಟ ಗುಡ್ಡಗಳು ಕಾಣದಷ್ಟು ಮಂಜಿನ ಹೊದಿಕೆ.. ಮೈ ಜುಮ್ಮೆನಿಸುವ ಚಳಿ.. ಇದೆಲ್ಲದರ ಜೊತೆಗೆ ಒಂದಿಷ್ಟು ತುಂತುರು ಮಳೆ. ಇದು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ ಅರಣ್ಯವ್ಯಾಪ್ತಿಯ ಗ್ರಾಮಗಳಲ್ಲಿ ನಿಸರ್ಗ ಸೃಷ್ಠಿಸಿರೋ ಅದ್ಭುತವಿದು. ಈ ಎಲ್ಲ ಪ್ರಕೃತಿ ಸೊಬಗು ಸವಿಯಲು ಪ್ರತಿದಿನ ಸಾವಿರಾರು ಪ್ರವಾಸಿಗರು ಕಡಿದಾದ ದಾರಿಯಲ್ಲಿ ಸಾಗಿ ಖಾನಾಪುರ ತಾಲೂಕಿನ ಕಣಕುಂಬಿ ಅರಣ್ಯ ವ್ಯಾಪ್ತಿಗೆ ಒಳಪಟ್ಟ ಜಾಂಬೋಟಿ, ಚಿಕಳೆ ಸೇರಿದಂತೆ ಕಾಡಂಚಿನ ಗ್ರಾಮಗಳತ್ತ ಬರುತ್ತಿದ್ದಾರೆ.
ನೋಡಿದಲ್ಲೆಲ್ಲಾ ಹಚ್ಚ-ಹಸಿರು ಇರುವಂತಹ ಪ್ರದೇಶದಲ್ಲಿ ಬೆಟ್ಟ ಗುಡ್ಡಗಳೇ ಕಾಣದಷ್ಟು ಮಂಜು, ಒಂದು ಕ್ಷಣ ಬಿಸಿಲು ಮತ್ತೊಂದು ಕ್ಷಣ ಚಳಿ ಈ ರೀತಿಯ ನೆರಳು ಬೆಳಕಿನಾಟದ ಮಧ್ಯೆ ಮಂಜಿನ ಸೊಬಗನ್ನು ನೋಡಲು ಕಣ್ಣಿಗೆ ಹಬ್ಬ. ಕೊರೊನಾ ಆತಂಕ, ಲಾಕ್‌ಡೌನ್ ಎಫೆಕ್ಟ್ ಹಾಗೂ ವರುಣಾರ್ಭಟಕ್ಕೆ ಬೇಸತ್ತ ಜನ ಈಗ ನಿರಾಳರಾಗಿದ್ದಾರೆ. ಹೀಗಾಗಿ ಕುಟುಂಬ ಸಮೇತ ನಿಸರ್ಗದತ್ತ ಮುಖ ಮಾಡುತ್ತಿದ್ದಾರೆ.
ಕಣಕುಂಬಿ ಅರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ನಿಸರ್ಗದ ಸೊಬಗು ಸವಿಯಲು ಮಹಾರಾಷ್ಟ್ರ ಗೋವಾದ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ನೆರೆಯ ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರದ ಜನರು ವೀಕೆಂಡ್ ಬಂದ್ರೆ ಸಾಕು ಇತ್ತ ಮುಖಮಾಡ್ತಾರೆ. ಗೋವಾಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಚಿಕಳೆ, ಜಾಂಬೋಟಿ ಗ್ರಾಮಗಳು ಬರೋದ್ರಿಂದ ಮುಖ್ಯ ರಸ್ತೆಯಿಂದ 10 ರಿಂದ 15 ಕಿಲೋಮೀಟರ್ ಸಾಗಿ ಒಂದೆರಡು ಕಿಲೋಮೀಟರ್ ವಾಕ್ ಹೋದ್ರೆ ಸಾಕು, ನಿಸರ್ಗದ ವೈಭವ ಕಣ್ಮುಂದೆ ಬರುತ್ತೆ.
ಒಟ್ಟಿನಲ್ಲಿ ಏಳೆಂಟು ತಿಂಗಳಿಂದ ಮನೆಯಲ್ಲಿ ಕುಳಿತು ಬೇಜಾರಾಗಿದ್ದ ಜನ ನಿಸರ್ಗದತ್ತ ಮುಖ ಮಾಡಿ ರಿಲ್ಯಾಕ್ಸ್ ಆಗುತ್ತಿರುವುದಂತು ಸುಳ್ಳಲ್ಲ.