ಬೆಳಗಾವಿ: ಕಳೆದ ಎರಡು ದಿನಗಳ ಹಿಂದೆ ಬೆಳಗಾವಿಯ ಕೇಂದ್ರ ಸಚಿವ ಸುರೇಶ ಅಂಗಡಿಯವರು ಸರ್ಕಾರದ ವತಿಯಿಂದ ಎರಡು ಸಾವಿರ ಆಹಾರದ ಕಿಟ್‍ಗಳನ್ನು ವಿತರಿಸಿದ್ದರು. ಆದ್ರೆ ವ್ಯವಸ್ಥಿತವಾಗಿ ಕಿಟ್‍ಗಳನ್ನು ಹಂಚಿಕೆ ಮಾಡದಿರುವ ಪರಿಣಾಮ ಕೆಲ ಕಾರ್ಮಿಕರಿಗೆ ನಿರಾಸೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ .
ಕಿಟ್ ಸಿಗದ ಕಾರ್ಮಿಕರು ಸುರೇಶ್ ಅಂಗಡಿ ಕಚೇರಿ ಬಳಿ ಹೋಗಿದ್ದು, ಅಲ್ಲಿ ನಾಳೆ ಬನ್ನಿ ಎಂದು ಹೇಳಲಾಗಿದೆ. ಕಳೆದ ಮೂರು ದಿನಗಳಿಂದಲೂ ಹೀಗೆ ನಡೆಯುತ್ತಿದ್ದು ಕಾರ್ಮಿಕ ಮಹಿಳೆಯರು ಕಣ್ಣೀರು ಹಾಕಿದ್ದಾರೆ. ಇನ್ನು ಕಿಟ್ ನೀಡುವ ಸ್ಥಳಕ್ಕೆ ಬರುವ ಹಾಗೂ ಹೋಗುವ ಬಸ್ ಪ್ರಯಾಣದ ದರದಲ್ಲೇ ಸರ್ಕಾರ ನಿಡೋ ದಿನಸಿ ಕಿಟ್ ಬರುತ್ತದೆ ಎನ್ನುತ್ತಿದ್ದಾರೆ ಕಾರ್ಮಿಕರು.
ಈ ಬಗ್ಗೆ ನೇಕಾರ ಕುಟುಂಬದ ಮಹಿಳೆಯರನ್ನು ಕೇಳಿದ್ರೆ, ನಮ್ಮ ನೇಕಾರಿಕೆ ಉದ್ಯೋಗ ನಿಂತು ಹೋಗಿದೆ. ಸಂಗ್ರಹವಾಗಿದ್ದ ಸೀರೆಗಳು ಮಾರಾಟವಾಗ್ತಿಲ್ಲ. ಇದರಿಂದಾಗಿ ಕೆಲಸವಿಲ್ಲ, ಮನೆಯಲ್ಲಿ ದಿನಸಿ ಸಾಮಗ್ರಿಗಳಿಲ್ಲ, ಮಕ್ಕಳಿಗೆ ತಿನ್ನಿಸಲು ಅನ್ನವಿಲ್ಲದೇ ಹಸಿವಿನಿಂದ ಕಣ್ಣೀರು ಹಾಕುತ್ತಿದ್ದಾರೆ. ಸಚಿವರು ನಮ್ಮ ಹೊಟ್ಟೆಗೂ ಏನಾದ್ರೂ ಕೊಡಬೇಕು, ಇಲ್ಲವೇ ಕೆಲಸ ಕೊಡಬೇಕು. ಮೂರು ದಿನಗಳಿಂದಲೂ ಬರುತ್ತಿದ್ದೇವೆ. ಆದ್ರೆ, ಬಡ ಕೂಲಿಕಾರ್ಮಿಕರ ಜೊತೆಗೆ ಸಚಿವರು ಆಟ ಆಡುತ್ತಿದ್ದಾರೆ. ಸಚಿವರು ಕಿಟ್ ಕೊಡತ್ತೇವೆ ಅಥವಾ ಕೊಡುವುದಿಲ್ಲ ಎಂದು ಹೇಳಿದ್ರೆ ನಾವು ಬರುವುದಾದರೂ ಬಿಡುತ್ತೇವೆ ಎನ್ನುವ ಮೂಲಕ ಕೂಲಿ ಕಾರ್ಮಿಕರ ಸಂಕಟ ಹೊರ ಹಾಕಿದ್ದಾರೆ.