ಕಿತ್ತೂರು: ಮಹಾಮಾರಿ ಕೊರೊನಾ ವೈರಸ್ ತಡೆಯಲು ಹಗಲಿರುಳು ಶ್ರಮಿಸುತ್ತಿರುವವರಿಗೆ ಸಹಾಯವಾಗಲೆಂದು, ಬಾಲಕರಿಬ್ಬರು ತಾವು ಕೂಡಿಟ್ಟಿದ್ದ ಹಣವನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಜಮಾ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
ತಾಲೂಕಿನ ಸಮೀಪದ ಅಂಬಡಗಟ್ಟಿ ಗ್ರಾಮದಲ್ಲಿ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ ಗ್ರಾಮೀಣ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಕೊರೊನಾ ವೈರಸ್ ಕುರಿತು ಪರೀಶಿಲನಾ ಸಭೆಯ ನಡೆಯುತ್ತಿತ್ತು. ಈ ವೇಳೆ ಬಾಲಕರು ತಾವು ಕೂಡಿಟ್ಟ ಹಣವನ್ನು ಶಾಸಕರ ಮೂಲಕ ತಹಶೀಲ್ದಾರರಿಗೆ ನೀಡಿದ್ರು.
ಅಂಬಡಗಟ್ಟಿ ಗ್ರಾಮದ ಬಾಲಕರಾದ ರೇವಂತ ಖೋದಾನಪುರ, ಲೋಹಿತ್ ಖೋದಾನಪುರ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಇಡೀ ದೇಶವನ್ನೇ ಕಾಡುತ್ತಿರುವ ಕೊರೊನಾ ಮಹಾಮಾರಿಗೆ, ಅಧಿಕಾರಿಗಳು, ವೈದ್ಯರು, ಪೊಲೀಸರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಎಲ್ಲ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂತವರ ನೆರವಿಗೆ ನಮ್ಮ ಹಣ ನೀಡುತ್ತೇವೆ ಎಂದು ಬಾಲಕರು ಹೇಳಿಕೊಂಡಿದ್ದಾರೆ.
ಬಳಿಕ ಮಾತನಾಡಿದ ಶಾಸಕ ಮಹಾಂತೇಶ ದೊಡ್ಡಗೌಡರ, ಖೋದಾನಪುರ ಕುಟುಂಬದ ಪುಟ್ಟ ಬಾಲಕರ ದೇಶಪ್ರೇಮ, ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿಯಾಗಿದೆ. ಮಕ್ಕಳು ಮಾಡಿದ ಸೇವೆ ಅನನ್ಯವಾಗಿದೆ. ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಬೆಳೆಸುವ ಜವಾಬ್ದಾರಿ ತಂದೆ, ತಾಯಿ ಮೇಲಿದೆ ಎಂದರು.