ಬೆಳಗಾವಿ: ಶನಿವಾರ ಮೊಹರಂ ಕೊನೆ ದಿನ. ಮೊಹರಂ ಹಿಂದೂ - ಮುಸ್ಲಿಮರ ಭಾವೈಕ್ಯತೆ ಸಾರುವ ಹಬ್ಬ. ಈ ಹಬ್ಬವನ್ನು ಯಾವುದೇ ತಾರತಮ್ಯವಿಲ್ಲದೇ, ಸರ್ವಧರ್ಮೀಯರು ಪಾಲ್ಗೊಂಡು ಹಬ್ಬವನ್ನು ಆಚರಿಸುತ್ತಾರೆ. ಮೊಹರಂ ಹಬ್ಬ ಮುಸ್ಲಿಮರಿಗೆ ದುಃಖವನ್ನು ಸೂಚಿಸುವ ಹಾಗೂ ಶೋಕಾಚರಣೆಯ ಹಬ್ಬವಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳಾದ ಹಾಗೂ ಹೊಸ ಇಸ್ಲಾಮಿಕ್ ವರ್ಷದ ಆರಂಭವನ್ನು ಸೂಚಿಸುವ ಮೊಹರಂ ತಿಂಗಳಲ್ಲಿ ಆಚರಿಸುವ ಪವಿತ್ರ ಮೊಹರಂ, ದುಃಖದ ಹಬ್ಬ, ಕಣ್ಣೀರಿನ ಹಬ್ಬವಾಗಿ ಮುಸ್ಲಿಮರು ಆಚರಿಸುತ್ತಾರೆ.
ಇನ್ನು ಮುಸ್ಲಿಂ ಬಂಧುಗಳೇ ಇಲ್ಲದ ಸವದತ್ತಿ ತಾಲೂಕಿನ ಪುಟ್ಟ ಗ್ರಾಮ ಹರ್ಲಾಪುರದಲ್ಲಿ ಹಿಂದೂಗಳೇ ಮೊಹರಂ ಆಚರಣೆ ಮಾಡುವ ಮೂಲಕ ಭಾವೈಕ್ಯತೆ ಮೆರೆಯುತ್ತಿದ್ದಾರೆ. ಇಂದು ಇಲ್ಲಿ ಪಂಜಾಗಳಿಗೆ ಭಕ್ತರು ಶ್ರದ್ಧೆಯಿಂದ ಪೂಜೆ ಸಲ್ಲಿಸುತ್ತಿರುವುದು, ನೈವೇದ್ಯ ಅರ್ಪಿಸುತ್ತಿರುವುದು, ಇನ್ನೂ ಕೆಲವರು ಹರಕೆ ತೀರಿಸುತ್ತಿರುವ ದೃಶ್ಯಗಳು ಕಂಡು ಬಂದವು.
ಈ ಊರಲ್ಲಿ ಮುಸ್ಲಿಮರ ಒಂದೂ ಮನೆ ಕೂಡ ಇಲ್ಲಿಲ್ಲ. ಭಾವೈಕ್ಯತೆ ಹೆಸರಾದ ಈ ಊರಿನಲ್ಲಿ ಹಿಂದೂಗಳೇ ತಮ್ಮ ಸ್ವಂತ ಹಣದಿಂದ ಫಕೀರಸ್ವಾಮಿ ದರ್ಗಾ ಕಟ್ಟಿದ್ದಾರೆ. ಅಲ್ಲಿಯೇ ಪಂಜಾಗಳನ್ನು ಪ್ರತಿಷ್ಠಾಪಿಸಿ, ಪೂಜೆ – ಪುನಸ್ಕಾರಗಳನ್ನು ಅನೇಕ ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಪಂಜಾಗಳನ್ನು ಕೂರಿಸುವುದು, ಪೂಜಿಸುವುದು, ಡೋಲಿಗಳನ್ನು ಸಿದ್ಧಪಡಿಸುವುದು ಹಾಗೂ ಮೊಹರಂ ಕಡೇ ದಿನದಂದು ಅವುಗಳ ಮೆರವಣಿಗೆ ಸೇರಿ ಎಲ್ಲ ವಿಧಿ ವಿಧಾನಗಳನ್ನು ಮಾಡುವುದು ಹಿಂದೂಗಳೇ ಎಂಬುದು ವಿಶೇಷ.
ಇಲ್ಲಿನ ಹಿರಿಯರ ಪ್ರಕಾರ, ಹಿಂದೆ ಮುಸ್ಲಿಂ ಸಮುದಾಯದ ಫಕೀರರೊಬ್ಬರು ಇಲ್ಲಿ ವಾಸವಿದ್ದರು. ಅವರು ನಿತ್ಯ ನಾಲ್ಕು ದೇವರಿಗೆ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದರು. ಅವರ ನಿಧನರಾದ ನಂತರ ಇಲ್ಲಿಯೇ ಅವರ ಅಂತ್ಯಕ್ರಿಯೆ ಮಾಡಿ, ಘೋರಿ ಕಟ್ಟಲಾಯಿತು. 11 ವರ್ಷಗಳ ಹಿಂದೆ ಅದಕ್ಕೆ ಹೊಂದಿಕೊಂಡು ದರ್ಗಾ ಕೂಡ ನಿರ್ಮಿಸಲಾಗಿದೆ. ಅಲ್ಲಿಯೇ ಪ್ರತಿವರ್ಷ ಪಂಜಾಗಳನ್ನು ಪ್ರತಿಷ್ಠಾಪಿಸುತ್ತ ಬರಲಾಗಿದೆ.
ಈ ಕುರಿತು ಗ್ರಾಮಸ್ಥರಾದ ಬಸಪ್ಪ ವಕ್ಕುಂದ ಈಟಿವಿ ಭಾರತದ ಜೊತೆ ಮಾತನಾಡಿ, ಮುಸ್ಲಿಂರಿಗಿಂತ ಹೆಚ್ಚು ಸಂಭ್ರಮದಿಂದ ನಮ್ಮೂರಲ್ಲಿ ಮೊಹರಂ ಆಚರಿಸುತ್ತೇವೆ. ಐದು ಕೈ ದೇವರು ಹೊರುವವರು ಹಿಂದೂಗಳೇ. ಆದರೆ, ಮುಸ್ಲಿಮರ ಭಾಷೆ ಮಾತ್ರ ನಮಗೆ ಬರುವುದಿಲ್ಲ. ಹಾಗಾಗಿ ಹರ ಹರ ಮಹಾದೇವ ಎಂದು ಘೋಷಣೆ ಕೂಗುತ್ತಾ ಗ್ರಾಮದಲ್ಲಿ ಮೆರವಣಿಗೆ ನಡೆಸುತ್ತೇವೆ ಎಂದರು.
ಗ್ರಾಮದ ಹಿರಿಯರಾದ ಗೌಡಪ್ಪ ವಕ್ಕುಂದ ಮಾತನಾಡಿ, ನಮ್ಮ ಅಜ್ಜ, ಮುತ್ತಜ್ಜರ ಕಾಲದಿಂದಲೂ ಇಲ್ಲಿ ಮೊಹರಂ ಆಚರಿಸಲಾಗುತ್ತಿದೆ.
ಅಮವಾಸ್ಯೆಯಾದ ಮೂರು ದಿನಕ್ಕೆ ಗುದ್ದಲಿ ಹಾಕುತ್ತೇವೆ. ಗುದ್ದಲಿ ಹಾಕಿದ ಐದನೇ ದಿನಕ್ಕೆ ದೇವರನ್ನು ಕೂರಿಸುತ್ತೇವೆ. ಐದು ದಿನಗಳ ಬಳಿಕ ದೇವರನ್ನು ಹೊಳೆಗೆ ಕಳಿಸುತ್ತೇವೆ. ಈ ವೇಳೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡುತ್ತೇವೆ. ಇದೆಲ್ಲ ಮಾಡೋದು ಹಿಂದೂಗಳೇ ಎಂದು ತಿಳಿಸಿದರು.
ಮೊಹರಂ ಕಡೇ ದಿನದಂದು ಪಂಜಾ ಹಿಡಿಯುವ ಗೋವಿಂದ ಚುಳಕಿ ಮಾತನಾಡಿ, ಈ ದರ್ಗಾದಲ್ಲಿ ಸರ್ವಧರ್ಮಗಳ ದೇವರ, ಮಹಾತ್ಮರ ಭಾವಚಿತ್ರಗಳನ್ನು ಹಾಕಲಾಗಿದೆ. ಇದು ನಮ್ಮ ಪಾಲಿನ ಶ್ರದ್ಧಾ ಕೇಂದ್ರವಾಗಿದೆ. ನಮ್ಮ ತಂದೆ ತೀರಿಕೊಳ್ಳುವ ಒಂದು ವರ್ಷ ಮುಂಚೆಯಿಂದ ನಾನು ದೇವರ ಸೇವೆ ಮಾಡುತ್ತಿದ್ದೇನೆ. ನಮ್ಮ ಎಲ್ಲ ಇಷ್ಟಾರ್ಥಗಳನ್ನು ದೇವರು ಈಡೇರಿಸಿದ್ದಾರೆ ಎಂದರು.
ಇಲ್ಲಿನ ಬೇವಿನ ರಸ ಹಾವು ಕಡಿತಕ್ಕೆ ರಾಮಬಾಣ: ಹೂಲಿಯಿಂದ ಯಲ್ಲಮ್ಮನಗುಡ್ಡಕ್ಕೆ ಸಂಚರಿಸುವ ಮಾರ್ಗದಲ್ಲಿ ಈ ಫಕೀರಸ್ವಾಮಿ ದರ್ಗಾ ಇದೆ. ಹಾಗಾಗಿ ವಿವಿಧೆಡೆಯಿಂದ ಯಲ್ಲಮ್ಮ ದೇವಿ ದರ್ಶನಕ್ಕೆ ಬರುವ ಭಕ್ತರು ಈ ದರ್ಗಾಕ್ಕೆ ಭೇಟಿ ಕೊಡುವುದು ರೂಢಿಯಾಗಿದೆ. ಇನ್ನು ಇದೇ ದರ್ಗಾ ಆವರಣದಲ್ಲಿರುವ ಬೇವಿನ ಮರಕ್ಕೂ ಭಕ್ತರು ಪೂಜಿಸುತ್ತಾರೆ. ಈ ಬೇವಿನ ಮರದ ಎಲೆಗಳನ್ನು ಅರಿದು, ರಸ ತೆಗೆದು ಕೂಡಿಸಿದರೆ ಹಾವು ಕಡಿತಕ್ಕೊಳಗಾದವರು ಗುಣಮುಖರಾಗುತ್ತಾರೆ ಎನ್ನುತ್ತಾರೆ ಗ್ರಾಮಸ್ಥ ಶಿವಪ್ಪ ವಕ್ಕುಂದ
ಒಟ್ಟಾರೆ ಪ್ರಸ್ತುತ ಜಾತಿ-ಧರ್ಮಗಳ ಮಧ್ಯ ದೊಡ್ಡ ಕಂದಕ ಏರ್ಪಟ್ಟಿರುವ ಸಂದರ್ಭದಲ್ಲಿ ನಾವೆಲ್ಲಾ ಒಂದು ಎಂಬ ಸಂದೇಶ ಸಾರುತ್ತಿರುವ ಹರ್ಲಾಪುರ ಗ್ರಾಮಸ್ಥರಿಗೆ ನಮ್ಮದೊಂದು ಸಲಾಂ.
ಇದನ್ನೂ ಓದಿ: ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ಶಾಕ್ ತಗುಲಿ ನಾಲ್ವರು ಸಾವು.. 6 ಮಂದಿಗೆ ಗಾಯ