ಬೆಳಗಾವಿ: ''ನಮ್ಮ ಸರ್ಕಾರದ ಅವಧಿಯಲ್ಲಿ ಜಾತಿ ಗಣತಿ ವರದಿ ಪೂರ್ಣವಾಗಿರಲಿಲ್ಲ. ಹಾಗಾಗಿ, ಬಿಡುಗಡೆಗೊಳಿಸಲು ಆಗಲಿಲ್ಲ. ಈಗ ವರದಿ ಕೇಳಿದ್ದೇನೆ'' ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ''ಹಿಂದುಳಿದ ವರ್ಗಗಳ ಆಯೋಗವು ಜಾತಿ ಗಣತಿ ವರದಿಯನ್ನು ಇನ್ನೂ ನಮಗೆ ನೀಡಿಲ್ಲ. ಜಾತಿ ಗಣತಿ ಹಾಗೂ ಸಾಮಾಜಿಕ, ಆರ್ಥಿಕ ಸರ್ವೆಗೆ ಕಾಂತರಾಜು ಅಧ್ಯಕ್ಷತೆಯಲ್ಲಿ ನಾನೇ ಆದೇಶ ನೀಡಿದ್ದೆ. ವರದಿ ಪೂರ್ಣಗೊಳ್ಳುವ ಮುನ್ನ ನಮ್ಮ ಸರ್ಕಾರದ ಅವಧಿ ಮುಗಿಯಿತು. ನಂತರ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಆ ವರದಿ ತೆಗೆದುಕೊಳ್ಳಲಿಲ್ಲ'' ಎಂದು ತಿಳಿಸಿದರು.
''ಆಗಿನ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವಧಿ ಮುಗಿಯಿತು. ಬಿಜೆಪಿ ನೇಮಿಸಿದ ಜಯಪ್ರಕಾಶ ಹೆಗಡೆ ಈಗ ಅಧ್ಯಕ್ಷರಾಗಿದ್ದಾರೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು ಅವರ ಕೆಲಸ. ಆದರೆ, ಅವರು ವರದಿ ನೀಡಿಲ್ಲ, ಕಾರ್ಯದರ್ಶಿನೂ ಸಹಿ ಮಾಡಿಲ್ವಂತೆ. ಅವರು ವರದಿ ಕೊಟ್ಟರೆ ನೋಡೋಣ. ನಾನು ಒಂದು ಸಾರಿ ವರದಿ ಕೇಳಿದ್ದೆ. ಅವರು ಕೊಡ್ತೀನಿ ಎಂದಿದ್ದರು. ಆದರೆ, ಆ ವರದಿಯನ್ನು ನಮ್ಮ ಸರ್ಕಾರಕ್ಕೆ ಕೊಡಲಿಲ್ಲ'' ಎಂದರು.
ಶಿವಮೊಗ್ಗ ಗಲಾಟೆ ವಿಚಾರ: ''ಶಿವಮೊಗ್ಗ ಗಲಾಟೆ ವೇಳೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಗಲಾಟೆಗೆ ಕಾರಣರಾದವರು ಯಾವುದೇ ಕೋಮು, ಪಕ್ಷಕ್ಕೆ ಸೇರಿದರೂ ಬಿಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಿದ್ದೇನೆ'' ಎಂದು ಸಿಎಂ ತಿಳಿಸಿದರು.
ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆಗೊಳಿಸಿ- ಸಚಿವ ಹೆಚ್.ಸಿ.ಮಹಾದೇವಪ್ಪ: ''ಬಿಹಾರ ರಾಜ್ಯದಲ್ಲಿ ಅಲ್ಲಿನ ಮುಖ್ಯಮಂತ್ರಿಗಳು ಜಾತಿ ಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ಅದೇ ರೀತಿಯಾಗಿ ರಾಜ್ಯದಲ್ಲೂ ಜಾತಿ ಗಣತಿ ವರದಿಯನ್ನು ಬಿಡುಗಡೆಗೊಳಿಸಬೇಕು. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾತಿ ಗಣತಿ ವರದಿ ಕೊಡಲು ಸಮಿತಿ ರಚನೆ ಮಾಡಲಾಗಿತ್ತು. ಸಮಾಜದಲ್ಲಿ ಪ್ರತಿಯೊಂದು ಸಮುದಾಯದ ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿ ತಿಳಿಯಲು ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕಾಗುತ್ತದೆ'' ಎಂದು ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಇಂದು (ಮಂಗಳವಾರ) ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ: ಮೈಸೂರು ದಸರಾ: ಸಾಮಾಜಿಕ ಸಂದೇಶ ಸಾರುವ ಸ್ತಬ್ಧಚಿತ್ರ ಸಿದ್ಧಪಡಿಸಿ- ಡಾ.ಹೆಚ್.ಸಿ.ಮಹದೇವಪ್ಪ ಸಲಹೆ