ಬೆಳಗಾವಿ: ಸವದತ್ತಿ ತಾಲೂಕಿನ ಉಗರಗೋಳ ಸಮೀಪದ ಯಲ್ಲಮ್ಮನಗುಡ್ಡದ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಬುಧವಾರ ಪೂರ್ಣಗೊಂಡಿತು. ಮೇ 17ರಿಂದ ಜೂನ್ 30ರ ಅವಧಿಯಲ್ಲಿ ಚಿನ್ನಾಭರಣ ಸೇರಿದಂತೆ 1.37 ಕೋಟಿ ರೂ. ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿದೆ. ಇದರಲ್ಲಿ 1,30,42,472 ರೂ. ನಗದು, 4.44 ಲಕ್ಷ ಮೌಲ್ಯದ ಚಿನ್ನಾಭರಣ ಹಾಗು 2.29 ಲಕ್ಷ ರೂ ಮೌಲ್ಯದ ಬೆಳ್ಳಿ ಆಭರಣಗಳು ಸೇರಿವೆ.
ದೇಶದ ವಿವಿಧ ರಾಜ್ಯಗಳಿಂದ ಯಲ್ಲಮ್ಮನಗುಡ್ಡಕ್ಕೆ ಆಗಮಿಸುವ ಲಕ್ಷಾಂತರ ಭಕ್ತರು, ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ದೇವಿಗೆ ಕಾಣಿಕೆ ರೂಪದಲ್ಲಿ ನಗದು, ಚಿನ್ನ, ಬೆಳ್ಳಿ ಆಭರಣ ಒಪ್ಪಿಸುತ್ತಾರೆ. ಅದರಲ್ಲೂ 'ಶಕ್ತಿ' ಯೋಜನೆಯಡಿ ಸರ್ಕಾರ ಮಹಿಳೆಯರಿಗೆ ಉಚಿತ ಸಾರಿಗೆ ಸೌಕರ್ಯ ಕಲ್ಪಿಸಿದ ಬಳಿಕ ಇಲ್ಲಿಗೆ ಆಗಮಿಸುವ ಮಹಿಳೆಯರ ಸಂಖ್ಯೆ ಹೆಚ್ಚಿದ್ದು, ದೇವಸ್ಥಾನದ ಆದಾಯವೂ ಜಾಸ್ತಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಯಲ್ಲಮ್ಮ ದೇವಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಬಿ. ಮಹೇಶ, "ಜೂನ್‍ನಲ್ಲಿ ಯಲ್ಲಮ್ಮ ದೇಗುಲಕ್ಕೆ ಬಂದ ಭಕ್ತರು 45 ದಿನದಲ್ಲಿ 1.37 ಕೋಟಿ ರೂ ಮೌಲ್ಯದ ಕಾಣಿಕೆ ಅರ್ಪಿಸಿದ್ದಾರೆ. ಶಕ್ತಿ ಯೋಜನೆಯಿಂದಾಗಿಯೂ ಕಾಣಿಕೆ ಪ್ರಮಾಣ ಹೆಚ್ಚಿದೆ. ಈ ಮೊತ್ತವನ್ನು ರಿಂಗ್ ರಸ್ತೆ, ತಂಗುದಾಣ ನಿರ್ಮಾಣ ಸೇರಿದಂತೆ ಭಕ್ತರಿಗೆ ಮೂಲಸೌಕರ್ಯ ಒದಗಿಸಲು ಬಳಸಲಾಗುವುದು" ಎಂದು ಮಾಹಿತಿ ನೀಡಿದರು.
ಯಲ್ಲಮ್ಮ ದೇವಸ್ಥಾನ, ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ, ಧಾರ್ಮಿಕ ದತ್ತಿ ಇಲಾಖೆ, ಸವದತ್ತಿ ತಹಶೀಲ್ದಾರ್ ಕಚೇರಿ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ ಜುಲೈ 5, 6 ಮತ್ತು 12ರಂದು ಹುಂಡಿ ಎಣಿಕೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವೈ.ವೈ.ಕಾಳಪ್ಪನವರ, ಅಭಿಯಂತರ ಎ.ವಿ.ಮೂಳ್ಳೂರ, ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಬಸವರಾಜ ಜಿರಗ್ಯಾಳ, ಅಧೀಕ್ಷಕ ಸಂತೋಷ ಶಿರಸಂಗಿ, ಪರಿವೀಕ್ಷಕ ಶೀತಲ್ ಕಡಟ್ಟಿ, ಎಂ.ಎಸ್.ಯಲಿಗಾರ, ಎಂ.ಪಿ.ದ್ಯಾಮನಗೌಡ್ರ, ಅಲ್ಲಮಪ್ರಭು ಪ್ರಭುನವರ, ಪ್ರಕಾಶ ಪ್ರಭುನವರ, ಆರ್.ಎಚ್.ಸವದತ್ತಿ, ರಾಜು ಬೆಳವಡಿ, ವಿ.ಪಿ.ಸೊನ್ನದ, ಪ್ರಭು ಹಂಜಗಿ, ಎಂ.ಎಂ.ಮಾಹುತ ಉಪಸ್ಥಿತರಿದ್ದರು.
ನಂಜುಂಡೇಶ್ವರನಿಗೆ ಒಂದೇ ತಿಂಗಳಲ್ಲಿ ₹1.77 ಕೋಟಿ ಅರ್ಪಿಸಿದ ಭಕ್ತರು!: ಮೈಸೂರು ಜಿಲ್ಲೆಯ ಐತಿಹಾಸಿಕ ನಂಜನಗೂಡಿನ ಶ್ರೀ ನಂಜುಂಡೇಶ್ವರನಿಗೆ ಭಕ್ತರು ಒಂದೇ ತಿಂಗಳಲ್ಲಿ 1.77 ಕೋಟಿ ರೂ. ಕಾಣಿಕೆ ನೀಡಿದ್ದಾರೆ. ಬುಧವಾರ ಬೆಳಗ್ಗೆಯಿಂದ ರಾತ್ರಿವರೆಗೂ ದೇವಾಲಯದಲ್ಲಿರುವ 34 ಹುಂಡಿಗಳಲ್ಲಿರುವ ಹಣ ಹಾಗೂ ಚಿನ್ನಾಭರಣವನ್ನು ದೇವಸ್ಥಾನದ ಸಿಬ್ಬಂದಿ ಹಾಗೂ ಬ್ಯಾಂಕ್‌ನ ಸಿಬ್ಬಂದಿ ಎಣಿಕೆ ಮಾಡಿದರು. ಹುಂಡಿಗಳಲ್ಲಿ 1,77,08,710 ಕೋಟಿ ರೂ. ನಗದು, 65 ಗ್ರಾಂ ಚಿನ್ನ, 3.5 ಕೆಜಿ ಬೆಳ್ಳಿ, 64 ವಿದೇಶಿ ಕರೆನ್ಸಿ ದೊರೆತಿದೆ.
ಕಳೆದ ಮೂರು ತಿಂಗಳಿನಿಂದ ನಂಜುಂಡೇಶ್ವರನ ಹುಂಡಿಯಲ್ಲಿ ಕೋಟಿಗೂ ಅಧಿಕ ಹಣ ಸಂಗ್ರಹವಾಗುತ್ತಿರುವುದರಿಂದ ದೇವಸ್ಥಾನದ ಆಡಳಿತ ಮಂಡಳಿಗೆ ಉತ್ತಮ ಆದಾಯ ಬರುವಂತಾಗಿದೆ.
ಶಕ್ತಿ ಯೋಜನೆ ಜಾರಿ ಬಳಿಕ ಹೆಚ್ಚಿದ ಕಾಣಿಕೆ: ಸಿಎಂ ಸಿದ್ದರಾಮಯ್ಯ ಸರ್ಕಾರ ಜುಲೈ 11ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿದೆ. ಇದರಿಂದಾಗಿ ರಾಜ್ಯಾದ್ಯಂತ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಈ ಯೋಜನೆ ಜಾರಿ ಬಳಿಕ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವವರ ಸಂಖ್ಯೆ ದ್ವಿಗುಣವಾಗಿದೆ. ಪರಿಣಾಮವಾಗಿ ಕಾಣಿಕೆಯೂ ಹೆಚ್ಚುತ್ತಿದೆ.
ಇದನ್ನೂ ಓದಿ: ತಿರುಮಲದಲ್ಲಿ ಟ್ರಾಲಿಯಿಂದ ಜಾರಿ ಬಿದ್ದ ಕಾಣಿಕೆ ಹುಂಡಿ: ವಿಡಿಯೋ