ಬೆಳಗಾವಿ: ಹೊಸ ಪಿಂಚಣಿ ಬದಲಾಗಿ ಹಳೆ ಪಿಂಚಣಿ ಜಾರಿ ಸೇರಿದಂತೆ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಬೆಳಗಾವಿಯಲ್ಲಿ ಶಿಕ್ಷಕರು ಬೈಕ್ ರ್ಯಾಲಿ ನಡೆಸಿದರು. ಐದು ವರ್ಷ ಜನಪ್ರತಿನಿಧಿಗಳಾಗುವ ಶಾಸಕರು, ಸಂಸದರಿಗೆ ಇರುವ ಪಿಂಚಣಿ ನಮಗೆ ಯಾಕಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಖಿಲ ಭಾರತ ಶಿಕ್ಷಕರ ಫೆಡರೇಶನ್ದಿಂದ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ಯಾತ್ರೆಯು ಕನ್ಯಾಕುಮಾರಿಯಿಂದ ಪ್ರಾರಂಭವಾಗಿದ್ದು, ಬುಧವಾರ ಬೆಳಗಾವಿಗೆ ಯಾತ್ರೆಯು ಆಗಮಿಸಿತು. ಈ ವೇಳೆ ಸಾವಿರಾರು ಶಿಕ್ಷಕರು ಈ ಯಾತ್ರೆಯಲ್ಲಿ ಭಾಗಿಯಾಗಿ, ರಕ್ತ ಕೊಟ್ಟೇವು ಪಿಂಚಣಿ ಬಿಡೆವು, ನಿಶ್ಚಿತ ಪಿಂಚಣಿ ನಮ್ಮ ಹಕ್ಕು, ಪಿಂಚಣಿ ಭಿಕ್ಷೆ ಅಲ್ಲ.. ನಮ್ಮ ಹಕ್ಕು, ಎನ್ ಪಿ ಎಸ್ ತೊಲಗಲಿ ಎಂದು ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.
ಇದೇ ವೇಳೆ ಈಟಿವಿ ಭಾರತ್ ಜತೆ ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್ ಡಿ ಗಂಗಣ್ಣವರ, 2006ರಿಂದ ಜಾರಿಗೆ ತಂದಿರುವ ಎನ್ ಪಿ ಎಸ್ ಮಾರಣಾಂತಿಕ ಕಾಯ್ದೆ ಜಾರಿಗೆ ತಂದಿದೆ. ವೃದ್ಧಾಪ್ಯದಲ್ಲಿ ವರವಾಗಿದ್ದ ಪಿಂಚಣಿಯನ್ನು ಕಿತ್ತುಕೊಂಡು ಸರ್ಕಾರಿ ನೌಕರರನ್ನು ಸರ್ಕಾರ ಬೀದಿಗೆ ತರುವ ಕೆಲಸ ಮಾಡಿದೆ ಎಂದು ಆರೋಪಿಸಿದರು.
ವಿಧಾನಸಭೆ ಚುನಾವಣೆ ಮುನ್ನ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ 16 ದಿನ ನಿರಂತರ ಹೋರಾಟ ಮಾಡಿದರೂ ಅಂದಿನ ಸರ್ಕಾರ ನಮಗೆ ಕಿಂಚಿತ್ತು ಬೆಲೆ ಕೊಡಲಿಲ್ಲ. ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತಾವು ಕೊಟ್ಟ ಭರವಸೆಯಂತೆ ಎನ್ ಪಿ ಎಸ್ ರದ್ದುಪಡಿಸಿ ಒಪಿಎಸ್ ಜಾರಿಗೆ ತರಬೇಕು. ಅದೇ ರೀತಿ ನೂತನ ಶಿಕ್ಷಣ ನೀತಿಯಲ್ಲಿನ ಲೋಪದೋಷಗಳನ್ನು ಕೈ ಬಿಡುಬುದು, ಅತಿಥಿ ಶಿಕ್ಷಕರ ಬದಲಾಗಿ ಕಾಯಂ ಶಿಕ್ಷಕರ ನೇಮಕಾತಿ, ರಾಷ್ಟ್ರದ ಎಲ್ಲಾ ನೌಕರರಿಗೆ ಭೇದ-ಭಾವವಿಲ್ಲದೆ ಏಕರೂಪದ ವೇತನ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಶಿಕ್ಷಕಿ ಲೀನಾ ಗಾಣಗಿ ಮಾತನಾಡಿ, 2007ರಿಂದ ಆಚೆಗೆ ನೇಮಕಾತಿ ಆಗಿರುವ ನಮಗೆಲ್ಲಾ ಪಿಂಚಣಿ ಇಲ್ಲ. ಇದರಿಂದ ನಿವೃತ್ತಿ ಬಳಿಕ ಸಂಧ್ಯಾ ಕಾಲದ ನಮ್ಮ ಜೀವನ ತುಂಬಾ ಕಷ್ಟಕರವಾಗಲಿದೆ. ನಮ್ಮ ಒಪಿಎಸ್ ಜಾರಿಗೆ ಬರೋವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.
ಮತ್ತೋರ್ವ ಶಿಕ್ಷಕಿ ಪುಷ್ಪಾ ಶಿಂತ್ರಿ ಮಾತನಾಡಿ, ಐದು ವರ್ಷದ ಅವಧಿಗೆ ಚುನಾವಣೆಯಲ್ಲಿ ಆಯ್ಕೆಯಾಗುವ ಎಂಪಿ, ಎಂಎಲ್ಎ ಗಳು ಪಿಂಚಣಿ ಪಡೆಯುತ್ತಿದ್ದಾರೆ. ಆದರೆ ನಾವು 60 ವರ್ಷ ಸರ್ಕಾರಿ ಸೇವೆ ಸಲ್ಲಿಸಿದರೂ ಸಂಧ್ಯಾಕಾಲದಲ್ಲಿ ನಮಗೆ ಪಿಂಚಣಿ ಇಲ್ಲ ಎಂದರೆ ಹೇಗೆ..? ಈಗಾಗಲೇ ದೇಶದ ಏಳು ರಾಜ್ಯಗಳಲ್ಲಿ ಎನ್ ಪಿ ಎಸ್ ರದ್ದುಪಡಿಸಿ ಒಪಿಎಸ್ ಜಾರಿಗೆ ತರಲಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಜಾರಿಗೆ ತರುವಂತೆ ಒತ್ತಾಯಿಸಿದರು.
ಇದನ್ನೂಓದಿ : ತಮಿಳುನಾಡಿಗೆ ಕಾವೇರಿ ನೀರು: ಕತ್ತೆಗಳ ಮೆರವಣಿಗೆ ಮಾಡಿ ಮಂಡ್ಯ ರೈತರ ಆಕ್ರೋಶ