ಬೆಳಗಾವಿ : ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ವಿರುದ್ಧ ಕ್ರಿಮಿನಲ್ ಪ್ರಕರಣದಡಿ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಚರ್ಚೆಗೆ ಅವಕಾಶ ಕೋರಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಮಂಡಿಸಿದ ನಿಲುವಳಿ ಸೂಚನೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿರಸ್ಕರಿಸಿದರು.
ನಿಲುವಳಿ ಪರಿಶೀಲಿಸಿದ್ದು, ನಿಲುವಳಿ ವ್ಯಾಪ್ತಿಯಲ್ಲಿ ಇದು ಬರುವುದಿಲ್ಲ. ಹಾಗಾಗಿ ನಿಲುವಳಿ ಸೂಚನೆಯನ್ನು ತಿರಸ್ಕರಿಸುತ್ತಿದ್ದೇನೆ ಎಂದು ಸ್ಪೀಕರ್ ಸದನಕ್ಕೆ ತಿಳಿಸಿ ಅತಿವೃಷ್ಟಿಗೆ ಸಂಬಂಧಿಸಿದಂತೆ ಸರ್ಕಾರ ಉತ್ತರ ನೀಡುವಂತೆ ಸ್ಪೀಕರ್ ಹೇಳಿದರು. ಆದರೆ, ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಆಗ ಸ್ಪೀಕರ್ ನಿಮ್ಮ ಸ್ಥಾನಗಳಿಗೆ ತೆರಳುವಂತೆ ಮನವಿ ಮಾಡಿದರೂ ಕಾಂಗ್ರೆಸ್ ಸದಸ್ಯರು ಕಿವಿಗೊಡಲಿಲ್ಲ. ಹಾಗಾಗಿ ಸದನವನ್ನು ಸೋಮವಾರಕ್ಕೆ ಮುಂದೂಡಿದರು.
ಇದಕ್ಕೂ ಮುನ್ನ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆ ಮಂಡಿಸಿ ಈ ಹಿಂದೆ ನೀವು (ಬಿಜೆಪಿ) ವಿಪಕ್ಷದಲ್ಲಿದ್ದಾಗ ಪೊಲೀಸ್ ಅಧಿಕಾರಿ ಗಣಪತಿ ಕೇಸ್‌ನಲ್ಲಿ ಮಾತನಾಡಿದ್ದಿರಿ. ಈಗ ತಿರಸ್ಕಾರ ಹೇಗೆ ಮಾಡ್ತೀರಾ ಎಂದು ಪ್ರಶ್ನೆ ಮಾಡಿದರು.
ಆಗ ಸ್ಪೀಕರ್ ಕೋಳಿವಾಡ್, ನಿಯಮ 69ಕ್ಕೆ ಬದಲಿಸಿದರು. ಆಗ ಬಿಜೆಪಿ ಎಲ್ಲರೂ ಚರ್ಚೆ ಮಾಡಿದ್ರಾ. ಆಗ ನಿಯಮ 60ರಲ್ಲಿ ಪ್ರಸ್ತಾಪ ಮಾಡಿ ಅಂದು ಸಚಿವರಾಗಿದ್ದ ಕೆ.ಜೆ. ಜಾರ್ಜ್ ರಾಜೀನಾಮೆ ನೀಡುವಂತೆ ಒತ್ತಾಯ ಮಾಡಿಸಿರಿಲಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಡುವೆ ವಾಕ್ಸಮರ :
ಈ ವೇಳೆ ಸದನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಭೈರತಿ ಬಸವರಾಜ್ ವಿರುದ್ಧ ಕೋರ್ಟ್‌ನಲ್ಲಿ ಕೇಸ್ ಇದೆ. ಇನ್ನೂ ಅವರನ್ನು ಇಟ್ಟುಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ, ಸಚಿವ ಬಸವರಾಜ ರಾಜೀನಾಮೆಗೆ ಆಗ್ರಹಿಸಿದರು.
ಆಗ ಮಧ್ಯ ಪ್ರವೇಶಿದ ಸಿಎಂ ಬಸವರಾಜ ಬೊಮ್ಮಾಯಿ, ಅದು ಹಳೆಯ ಪ್ರಕರಣ. ಅವರೇ ಉತ್ತರ ನೀಡಿದ್ದಾರೆ. ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಸದಸ್ಯರು ಒತ್ತಾಯ ಮಾಡಿದರು. ಆಗ ಸ್ಪೀಕರ್ ಮಾತನಾಡಿ, ಇಂದು ಇರುವ ವಿಚಾರಗಳ ಚರ್ಚೆ ಮಾಡೋಣ ನಂತರ ಅದನ್ನು ಪರಿಶೀಲಿಸೋಣ. ಇದು ನಿಯಮಾವಳಿಯಲ್ಲಿ ಹೇಗೆ ಬರಲಿದೆ ಎಂದು ನೋಡೋಣ ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣ ಕುರಿತು ಸದನದಲ್ಲಿ ಚರ್ಚಿಸಲು ಬರುವುದಿಲ್ಲ. ಹಾಗಾಗಿ ನಿಲುವಳಿ ಸೂಚನೆ ಮಂಡನೆ ಮಾಡುವುದೇ ಸರಿಯಲ್ಲ. ಇದಕ್ಕೆ ಅವಕಾಶ ನೀಡಬಾರದು ಎಂದರು.
ಸದನದ ಬಾವಿಗಿಳಿದ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು :
ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪೀಕರ್ ಹೇಳಿದಾಗ ಸದನದ ಬಾವಿಗಿಳಿದು ಕೈ ಸದಸ್ಯರು ಪ್ರತಿಭಟನೆಗೆ ಮುಂದಾದರು. ಆಗ ಸ್ಪೀಕರ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.