ಬೆಳಗಾವಿ : ಆಕ್ಸಿಜನ್ ಕೊರತೆ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹಾಗೂ ಶಾಸಕ ಅಭಯ ಪಾಟೀಲ ಮಧ್ಯೆ ವಾಗ್ವಾದ ನಡೆಯಿತು. ಕೋವಿಡ್ ನಿಯಂತ್ರಣ ಸಂಬಂಧ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ವಿಡಿಯೋ ಕಾನ್ಫರೆನ್ಸ್ ವೇಳೆ ಬಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಶಾಸಕ ಅಭಯ ಪಾಟೀಲ ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮುಂದೆ ದೂರಿನ ಸುರಿಮಳೆಗೈದರು. ಬಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾಗುತ್ತಿದೆ. ಹೀಗಾಗಿ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದರ ಬಗ್ಗೆ ಸಿಎಂ ಗಮನಕ್ಕೆ ತಂದರು. ಈ ವೇಳೆ ಡಿಸಿಎಂ ಗೋವಿಂದ ಕಾರಜೋಳ ಮಧ್ಯಪ್ರವೇಶಿಸಿ ಮಾತನಾಡಿದರು.
ಓದಿ : ಕೋವಿಡ್ ವಾರ್ಡ್ನಲ್ಲೇ ಶವ.. ಬಿಮ್ಸ್ ಅವ್ಯವಸ್ಥೆ ಕಂಡು ಡಿಸಿಎಂ ಸವದಿ ಕೆಂಡಾಮಂಡಲ
ಇದರಿಂದ ಕೋಪಗೊಂಡ ಶಾಸಕ ಅಭಯ ಪಾಟೀಲ, ನಾನು ಮಾತನಾಡುವಾಗ ಗೋವಿಂದ ಕಾರಜೋಳ ಅವರು ಮಾತನಾಡಿದ್ದೇಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದಾಗಿ ಡಿಸಿಎಂ ಕಾರಜೋಳ ಮತ್ತು ಶಾಸಕ ಅಭಯ್ ಪಾಟೀಲ್ ನಡುವೆ ವಾಗ್ವಾದ ಉಂಟಾಯಿತು. ಮಾತನಾಡಲು ಅವಕಾಶ ನೀಡದಿದ್ದರೆ ನನ್ನನ್ನೇಕೆ ವಿಡಿಯೋ ಕಾನ್ಫರೆನ್ಸ್ಗೆ ಕರೆದಿದ್ದೀರಿ ಎಂದು ಅಭಯ್ ಪಾಟೀಲ್ ಗರಂ ಆದರು. ನೇಕಾರರು ಸಂಕಷ್ಟದಲ್ಲಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನೇಕಾರರು, ಕೂಲಿ ಕಾರ್ಮಿಕರಿಗೆ ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಗೋವಿಂದ ಕಾರಜೋಳ, ಬಿಮ್ಸ್‌ನಲ್ಲಿ 13 ಕೆಎಲ್ ಟ್ಯಾಂಕ್ ಇದೆ, ಆಕ್ಸಿಜನ್ ಸಮಸ್ಯೆ ಇಲ್ಲ ಎಂದು ಸಮರ್ಥನೆ ಮಾಡಿಕೊಂಡರು. ಆಗ ಇಬ್ಬರು ನಾಯಕರನ್ನು ಸಮಾಧಾನಪಡಿಸಿದ ಸಿಎಂ ಯಡಿಯೂರಪ್ಪ. ನಾನೇ ಬೆಳಗಾವಿಗೆ ಬಂದು ಸಮಸ್ಯೆ ಬಗೆಹರಿಸುವೆ ಎಂದು ಭರವಸೆ ನೀಡಿದರು.