ಬೆಳಗಾವಿ: ಗೋವಿಂದ ಕಾರಜೋಳ ಬೆಳಗಾವಿಯ ಪ್ಲೇಯಿಂಗ್ ಮಂತ್ರಿ ಆಗಿದ್ದಾರೆ. ಬೆಳಗಾವಿ ದೊಡ್ಡ ಜಿಲ್ಲೆ. ಇಲ್ಲಿನ ಉಸ್ತುವಾರಿ ಫ್ಲೈಯಿಂಗ್ ಮಂತ್ರಿಗಳಾಗಿದ್ದು, ಫ್ಲೈಯಿಂಗ್ ವಿಸಿಟ್ ಕೊಡುತ್ತಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಲೇವಡಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯರ ನಡೆ ಹಳ್ಳಿ ಕಡೆ ಅಂತಾ ಸರ್ಕಾರ ಅಭಿಯಾನ ಮಾಡುತ್ತಿದೆ. ಆದರೆ ನನ್ನ ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ. ಪಿಹೆಚ್‌ಸಿಗಳಲ್ಲಿ ಖಾಲಿ ಗೋಡೆಗಳಿವೆ ಹೊರತು ವೈದ್ಯ ಸಿಬ್ಬಂದಿ ಇಲ್ಲ. ಅಸ್ತವ್ಯಸ್ತವಾದ ವ್ಯವಸ್ಥೆ ಸರಿ ಮಾಡುವಂತೆ ಸಿಎಂ ಗಮನಕ್ಕೆ ತಂದಿದ್ದೇನೆ. ಸಿಎಂ ಬಿಎಸ್‌ವೈ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಾನು ರಾಜಕಾರಣ ಮಾಡೋದಿಲ್ಲ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಅನೇಕ ವ್ಯವಸ್ಥೆ ಸರಿಪಡಿಸಬೇಕಾಗಿದೆ. ಪ್ರತಿ ತಾಲೂಕಿಗೆ ನಿತ್ಯ ಕೇವಲ 150 ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. 50 ಲಕ್ಷ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ನಿತ್ಯ 7 ಸಾವಿರ ಟೆಸ್ಟಿಂಗ್ ನಡೆಯುತ್ತಿದೆ. ನಿತ್ಯ ಎರಡ್ಮೂರು ಲಕ್ಷ ಟೆಸ್ಟಿಂಗ್ ಆಗಬೇಕು. ಎಲ್ಲಾ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತಂದಿದ್ದೇನೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಈ ಧೈರ್ಯದ ಮಾತುಗಳ ಜೊತೆಗೆ ಕೆಲಸಗಳು ಶೀಘ್ರವಾಗಿ ಆಗಲಿ ಅಂತ ಕೇಳಿಕೊಳ್ಳುತ್ತೇನೆ ಎಂದರು.
ಬಿಮ್ಸ್ ಅವ್ಯವಸ್ಥೆ ನನ್ನ ಗಮನಕ್ಕೂ ಇದೆ. ಬಿಮ್ಸ್‌ನಲ್ಲಿ ಕೇವಲ 370 ಬೆಡ್‌ಗಳಿವೆ. ಇನ್ನೂ 500 ಆಕ್ಸಿಜನ್ ಬೆಡ್ ಮಾಡಬೇಕಿದೆ, ಅದೂ ಆಗ್ತಿಲ್ಲ. ಜನರು ಕೇಳಿದಾಗ ಬೆಡ್ ಇಲ್ಲ ಬೆಡ್ ಇಲ್ಲ ಅಂತ ಹೇಳ್ತಾರೆ. ಬೆಡ್‌ಗಳು ಸಿಕ್ಕ ಸಮಯದಲ್ಲಿ ಪಕ್ಕದಲ್ಲೇ ಹೆಣಗಳು ಇರುತ್ತವೆ. ನನ್ನ ಪಕ್ಕದಲ್ಲೇ ಹೆಣ ಇದೆ, ಹೆದರಿಕೆ ಆಗ್ತಿದೆ ಅಂತ ಸೋಂಕಿತರು ಫೋನ್ ಮಾಡಿ ಹೇಳ್ತಾರೆ. ಇಂತಹ ಒಂದು ವ್ಯವಸ್ಥೆ ಬಿಮ್ಸ್ನಲ್ಲಿದ್ದು ಯಾವಾಗ ಸರಿಯಾಗುತ್ತೋ? ಬಿಮ್ಸ್‌ನಲ್ಲಿ ಅಧಿಕಾರಿಗಳ ಮಧ್ಯೆ ಹೋಂದಾಣಿಕೆ ಇಲ್ಲ. ಬಿಮ್ಸ್ ಆಡಳಿತ ಮಂಡಳಿಯಲ್ಲಿ ಮೂರು ಗುಂಪುಗಳಿವೆ ಎಂಬ ಮಾಹಿತಿ ಇದೆ. ಇವರ ಹೆಸರು ಕೆಡಿಸಲು ಅವರು, ಅವರ ಹೆಸರು ಕೆಡಿಸಲು ಇವರು ಕೆಲಸ ಮಾಡ್ತಿದ್ದಾರೆ. ಡಾಕ್ಟರ್‌ಗಳು ಕಣ್ಣಿಗೆ ಕಾಣುವ ದೇವರು ಅಂತ ಜನ ನಂಬಿದ್ದಾರೆ. ಇಂತಹ ಸಂದರ್ಭದಲ್ಲಿ ಈ ರೀತಿ ಮಾಡಿದ್ರೆ ಆ ಭಗವಂತ ಸಹ ಮೆಚ್ಚಲ್ಲ ಎಂದು ಬಿಮ್ಸ್ ವೈದ್ಯರ ವಿರುದ್ಧ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದರು.