ಬೆಳಗಾವಿ: ದೇಶದಲ್ಲಿ ಜನರು ಅನಗತ್ಯವಾಗಿ ಭಯಪೀಡಿತರಾಗಿದ್ದಾರೆ. ಹಾಗಾಗಿ ವಿಶ್ವದ ಎಲ್ಲಾ ಕ್ಷೇತ್ರಗಳಲ್ಲಿಯೂ ಹಾನಿ ಉಂಟಾಗಿದೆ. ರಾಜ್ಯದ ಪ್ರವಾಸೋದ್ಯಮ ಇಲಾಖೆಯಲ್ಲಿಯೂ ಭಾಗಶಃ ಹಾನಿಯಾಗಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ವಿಷಯದ ಕುರಿತಾಗಿ ಜನರಲ್ಲಿ ಅನಗತ್ಯ ಗೊಂದಲ ಬೇಡ, ಎಚ್ಚರಿಕೆ ಇರಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊರೊನಾ ವೈರಸ್ ಕುರಿತಂತೆ ಪ್ರತ್ಯೇಕ ಬಜೆಟ್ ಮಂಡನೆ ಮಾಡುವ ಹೇಳಿಕೆಗೆ ಕುರಿತಂತೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರು ಅನುಭವಿ ರಾಜಕಾರಣಿ. ಬಹಳ ವರ್ಷಗಳಿಂದ ರಾಜಕಾರಣದಲ್ಲಿದ್ದಾರೆ. ಈಗಾಗಲೇ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು, ಅಗತ್ಯವಿದ್ದರೆ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.