ಬೆಳಗಾವಿ: ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಬಾಣಂತಿ ಮಹಿಳೆ ಕುಟುಂಬ ಸ್ವಗ್ರಾಮಕ್ಕೆ ತೆರಳಲು ಬಸ್ ಇಲ್ಲದೇ ಪರದಾಡಿದ ಘಟನೆ ಇಂದು ನಡೆಯಿತು.
ಗೋಕಾಕ್ ಮೂಲದ ಬಾಣಂತಿ ಗೀತಾ ದಳವಾಯಿ ಎಂಬುವವರು ನಗರದ ಮಾರ್ಕೆಟ್ ಠಾಣೆ ಎದುರು ಮನೆಗೆ ತೆರಳಲು ವಾಹನ ಸೌಲಭ್ಯವಿಲ್ಲದೆ ಅಸಹಾಯಕರಾಗಿ ಕುಳಿತಿದ್ದರು. ಇವರು ಕಳೆದ ನಾಲ್ಕು ದಿನಗಳ ಹಿಂದೆ ಅನಾರೋಗ್ಯ ಸಮಸ್ಯೆ ಹಿನ್ನೆಲೆ ತನ್ನ ಮಗು ಹಾಗೂ ತಾಯಿಯೊಂದಿಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಆಗಮಿಸಿದ್ದರು.
ನಂತರ ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಚಿಕಿತ್ಸೆ ಮುಗಿದಿದ್ದರಿಂದ ಗೀತಾ ಅವರನ್ನು ಬಿಮ್ಸ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿ ಇಂದು ಡಿಸ್ಚಾರ್ಜ್ ಮಾಡಿದ್ದರು. ಆದರೆ, ದೇಶದೆಲ್ಲೆಡೆ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಲಾಕ್‌ಡೌನ್ ಘೋಷಣೆ ಆಗಿದ್ದರ ಪರಿಣಾಮ ಬಸ್ ಸೇವೆ ಸ್ಥಗಿತವಾಗಿದೆ.
ಇದರಿಂದ ಗೀತಾ ಹಾಗೂ ಅವರ ತಾಯಿ ಮಗುವಿನೊಂದಿಗೆ ಅಸಹಾಯಕರಾಗಿ ಕುಳಿತಿದ್ದರು. ಈ ಸಮಯಕ್ಕೆ ಅಲ್ಲಿಗೆ ಧಾವಿಸಿದ ನಗರದ ಸಮಾಜ ಸೇವಕ ಸುರೇಂದ್ರ ಅನಗೋಳಕರ್ ಅವರು ತಮ್ಮ ಸ್ವಂತ ವಾಹನದಲ್ಲಿ ಗೋಕಾಕ್‌ಗೆ ಕರೆದುಕೊಂಡು ಹೋಗುವ ಮೂಲಕ ಮಾನವೀಯತೆ ಮರೆದಿದ್ದಾರೆ.