ಚಿಕ್ಕೋಡಿ: ಎಲ್ಲಾ ಹಾವುಗಳು ಕಚ್ಚುವುದಿಲ್ಲ, ಹಾವುಗಳನ್ನು ಕೊಲ್ಲಬೇಡಿ. ಅವು ನಿಮ್ಮ ಮನೆಗೆ ಬಂದರೆ ನನಗೆ ಕರೆ ಮಾಡಿ. ನಾವು ಹಿಡಿದುಕೊಂಡು ಹೋಗುತ್ತೇವೆ ಎಂದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಉರಗ ಪ್ರೇಮಿ ಗಜಾನನ ಮೈಶಾಳೆ ಮನವಿ ಮಾಡಿದ್ದಾರೆ.
ರಾಯಬಾಗ ತಾಲೂಕಿನಲ್ಲಿ ಎಲ್ಲೇ ಹಾವು ಬಂದರೂ ಮೊದಲು ನೆನಪಾಗುವುದು ಗಜಾನನ ಮೈಶಾಳೆ. ಇವರು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಈವರೆಗೂ 10 ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಹಾಗಾಗಿ ಇವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉರಗಗಳಿಂದ ಮನುಷ್ಯರಿಗೆ ಹಲವು ಉಪಯೋಗಗಳಿವೆ. ಹಾವು ರೈತನ ಮಿತ್ರ. ಹಾವು ಒಂದು ವಿಶಿಷ್ಠವಾದ ಪ್ರಾಣಿ ಪ್ರಬೇಧ. ಅವುಗಳನ್ನು ವಿನಾ ಕಾರಣ ಕೊಲ್ಲಬೇಡಿ. ಬದಲಾಗಿ ಇಂತಹ ಪ್ರಾಣಿ ಪ್ರಬೇಧಗಳು ಮುಂದಿನ ಪೀಳಿಗೆಗೂ ಇರಲಿ. ಯಾವುದೇ ಪ್ರಾಣಿಯೂ ನಮಗೆ ವಿನಾ ಕಾರಣ ತೊಂದರೆ ಕೊಡುವುದಿಲ್ಲ. ಅವುಗಳಿಗೆ ತೊಂದರೆಯಾದರೆ ಯಾವುದೇ ಜೀವಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ತಿರುಗಿ ಬೀಳಲೇಬೇಕು. ಆದ್ದರಿಂದ ಇಂತಹ ಪ್ರಾಣಿಗಳನ್ನು ಉಳಿಸಿ ಪೋಷಿಸುವ ಜವಾಬ್ದಾರಿ ಬುದ್ಧಿಜೀವಿಗಳಾದ ನಮ್ಮ ಕರ್ತವ್ಯ ಎಂದು ಹಾವು ಹಿಡಿಯಲು ಹೋದ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತಿಳವಳಿಕೆ ನೀಡುತ್ತಾರೆ.
ಈ ಭೂಮಂಡಲದ ಜೀವ ವೈವಿದ್ಯದಲ್ಲಿ ಎಲ್ಲಾ ಪ್ರಾಣಿಗಳಿಗೂ ಮಾನವನಷ್ಟೇ ಜೀವಿಸುವ ಹಕ್ಕಿದೆ. ಪ್ರಾಣಿಗಳು ನಮಗೆ ಹೇಗೆ ತೊಂದರೆ ಕೊಡುವುದಿಲ್ಲವೋ ಅದೇ ರೀತಿ ಮನುಷ್ಯರು ಕೂಡ ಜೀವಿಗಳಿಗೆ ತೊಂದರೆ ನೀಡದಿರುವ ಬುದ್ಧಿ ಕಲಿತುಕೊಳ್ಳಬೇಕು. ಈ ಸೃಷ್ಟಿಯಲ್ಲಿ ಹಾವುಗಳು ವಿಶೇಷವಾದ ಜೀವಿಗಳು. ಇದರ ನಾನಾ ಜಾತಿಯ ಪ್ರಬೇಧಗಳನ್ನು ಉಳಿಸಿ ಬೆಳೆಸಬೇಕು. ಹಾವು ಕಂಡಲ್ಲಿ ಹೊಡೆದು ಸಾಯಿಸದೆ ಉರಗ ತಜ್ಞರಿಗೆ ಕರೆ ಮಾಡಿ ಹಾವು ಹಿಡಿದು ಕಾಡಿಗೆ ಬಿಡಲು ಸಹಕರಿಸಬೇಕು ಎಂದು ಹೇಳಿದರು.