ಬೆಳಗಾವಿ: ತಲೆಹರಟೆ ಮಾತಿನಿಂದಲೇ ಸಿಎಂ ಕುರ್ಚಿಯಿಂದ ಕೆಳಗಿಳಿದಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನಿಗೆ ತಲೆ ಇಲ್ಲ. ಏನು ಬೇಕಾದರೂ ಮಾತನಾಡುತ್ತಾನೆ. ಬೆಳಗ್ಗೆಯೊಂದು ಸಂಜೆಯೊಂದು ಹೇಳಿಕೆ ಕೊಡ್ತಾನೆ. ಇದಕ್ಕೆಲ್ಲಾ ನಾವು ಬೆಲೆ ಕೊಡಲ್ಲ. ಸಿದ್ದರಾಮಯ್ಯನಿಗೂ ಬಿಜೆಪಿಯ ಮುಖ್ಯಮಂತ್ರಿಗೂ ಏನು ಸಂಬಂಧ. ತಲೆಹರಟೆ ಮಾತನಾಡಿಯೇ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡಿದ್ದಾರೆ ಎಂದರು.
ಮೋದಿ, ಬಿಎಸ್‌ವೈ, ನಳಿನ್ ಕುಮಾರ್ ಬಗ್ಗೆ ಏಕವಚನದಲ್ಲಿ ಮಾತನಾಡ್ತಾರೆ. ಏಕವಚನದಲ್ಲಿ ಮಾತನಾಡೋ ಸಿದ್ದರಾಮಯ್ಯಗೆ ನಾನು ಏಕವಚನದಲ್ಲೇ ಮಾತನಾಡುತ್ತೇನೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಒಂದೊಂದು ಹೇಳಿಕೆ ಕೊಡ್ತಾನೆ. ಅವನ ಹೇಳಿಕೆಗೆ ನಾವ್ಯಾರೂ ಉತ್ತರ ಕೊಡೋ ಅವಶ್ಯಕತೆ ಇಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಭಾನುವಾರ ಸಂಪುಟ ವಿಸ್ತರಣೆ ಆಗಬಹುದು, ಆ ಬಗ್ಗೆ ನನಗೆ ಗೊತ್ತಿಲ್ಲ. ಗ್ರಾಪಂ ಚುನಾವಣೆ ಸಂದರ್ಭದಲ್ಲಿ ಐತಿಹಾಸಿಕ ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯಕಾರಿಣಿ ಸಭೆ ನಡೆಸುತ್ತಿದ್ದೇವೆ. 5,808 ಗ್ರಾಪಂ ಚುನಾವಣೆಯಲ್ಲಿ ಶೇ. 80ರಷ್ಟು ಬಿಜೆಪಿ ಗೆಲುವು ದಾಖಲಿಸಲಿದೆ. ಈ ಸಂಬಂಧ ಬೆಳಗಾವಿಯಿಂದ ಸ್ಫೂರ್ತಿ ತೆಗೆದುಕೊಂಡು ಹೋಗುತ್ತೇವೆ. ನಮ್ಮ ಪಕ್ಷದ ರಾಷ್ಟ್ರೀಯ ಉಸ್ತುವಾರಿ, ರಾಜ್ಯಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಲಿದ್ದೇವೆ. ಸಂಘಟನೆ ಗಟ್ಟಿ ಮಾಡುವ ನಿಟ್ಟಿನಲ್ಲಿ ಪ್ರೇರಣಾದಾಯಕ ಸಭೆ ಇದಾಗಲಿದೆ ಎಂದರು.