ಬೆಳಗಾವಿ : ಯಾವ ಕಾರಣಕ್ಕೂ ಕೋಲಾರದಿಂದ ಸಿದ್ದರಾಮಯ್ಯನವರು ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ ಎಂದು ಮಾಜಿ ಸಿಎಂ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರು ಭವಿಷ್ಯ ನುಡಿದಿದ್ದಾರೆ. ಬೆಳಗಾವಿ ನಗರದಲ್ಲಿ ಕಾಂಗ್ರೆಸ್ನಿಂದ ಕೋಲಾರದಲ್ಲಿ ಪ್ರಜಾಧ್ವನಿ ಯಾತ್ರೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡೋದಿಲ್ಲ. ನಾನು ಭವಿಷ್ಯ ಹೇಳುತ್ತಿಲ್ಲ. ಅವರು ಕೋಲಾರದಿಂದ ನಿಲ್ಲುವುದಿಲ್ಲ. ಡ್ರಾಮಾ ಮಾಡುತ್ತಿದ್ದಾರೆ, ಮೈಸೂರಿಗೆ ಬರೋಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಮನೆಗೆ ಹೋಗುವುದು ನಿಶ್ಚಿತ: ಕೋಲಾರದಲ್ಲಿ ನಿಂತುಕೊಂಡ್ರೆ ಅವರು ಮನೆಗೆ ಹೋಗುವುದು ನಿಶ್ಚಿತ ಅಂತಾ ಗೊತ್ತಿದ್ದರೂ ಸುಮ್ಮನೆ ರಾಜಕೀಯ ಆಟ, ನಾಟಕ ಮಾಡುತ್ತಿದ್ದಾರೆ. ನನ್ನ ಪ್ರಕಾರ ಅವರು ಕೋಲಾರದಲ್ಲಿ ನಿಲ್ಲುವುದಿಲ್ಲ ಮೈಸೂರಿಗೆ ಹೋಗಬಹುದು. ಅದಾದ ಬಳಿಕ ಮುಂದಿನ ಸ್ಟ್ಯಾಟರ್ಜಿ ಮಾಡಬೇಕು ಮಾಡುತ್ತೇವೆ ಎಂದು ಹೇಳಿದರು. ಸಿದ್ದರಾಮಯ್ಯನವರು ಎರಡು ಕಡೆಯಾದ್ರೂ ಸ್ಪರ್ಧೆ ಮಾಡಲಿ, ಮೂರು ಕಡೆಯಾದ್ರೂ ಮಾಡಲಿ ಮನೆಗೆ ಹೋಗುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ನಾವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ: ಭ್ರಷ್ಟಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್ ಪಕ್ಷ. ಅವರು ಅಧಿಕಾರದ ಅವಧಿಯಲ್ಲಿ ಯಾವ ರೀತಿ ಲೂಟಿ ಮಾಡಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ. ಅದಕ್ಕಾಗಿಯೇ ಜನ ಅವರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಈಗ ಅವರು ತಬ್ಬಲಿಗಳಂತೆ ಓಡಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಸ್ವಲ್ಪ ಉಸಿರಾಡುತ್ತಿದ್ದಾರೆ. ಚುನಾವಣೆ ಆದ ಮೇಲೆ ಉಸಿರು ನಿಲ್ಲುತ್ತದೆ. ನಾವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಸಚಿವ ಅಶ್ವತ್ಥನಾರಾಯಣ್: ಭ್ರಷ್ಟಾಚಾರ ಬೆಳೆಸಿ, ಪೋಷಿಸಿ ಅದನ್ನೇ ಆರಾಧಿಸಿ ನಮ್ಮ ದೇಶ, ಸಂಸ್ಕೃತಿ, ಸಮಾಜದಲ್ಲಿ ಭ್ರಷ್ಟಾಚಾರ ಬೆಳೆಸಿದವರು ಕಾಂಗ್ರೆಸ್ ಪಕ್ಷದವರು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಅಶ್ವತ್ಥ ನಾರಾಯಣ್ ಅವರು ಹರಿಹಾಯ್ದರು. ಕಾಂಗ್ರೆಸ್ ಪಕ್ಷದಿಂದ 300 ಕಡೆ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ವಿಚಾರವಾಗಿ ಸಚಿವ ಅಶ್ವತ್ಥ ನಾರಾಯಣ್, ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ, ಪ್ರತಿಭಟನೆ ಮೂಲಕ ನಾಟಕ ಮಾಡಲು ಹೊರಟಿದ್ದಾರೆ. ಜನ ಕೇಳಲ್ಲ, ಗೂಂಡಾಗಿರಿ, ಭ್ರಷ್ಟಾಚಾರ, ತುಷ್ಟೀಕರಣ ಅಂದ್ರೆ ಕಾಂಗ್ರೆಸ್ ಅಂತಾ ಜನ ನೋಡಿದ್ದಾರೆ ಎಂದು ಹರಿಹಾಯ್ದರು.
ದೇಶದ ಉದ್ದಗಲದಲ್ಲಿ ಜನರು ಸಂಪೂರ್ಣ ತಿರಸ್ಕಾರ ಮಾಡಿದ್ದಾರೆ: ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ಸಂಪೂರ್ಣವಾಗಿ ಆಡಳಿತದಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಪಕ್ಷ ನಮ್ಮ ದೇಶಕ್ಕೆ ಮಾರಕವಾಗಿದೆ. ಇವರು ಏನೇ ಕಥೆ ಹೇಳಿದರೂ ಏನೇ ಪ್ರಯತ್ನ ಮಾಡಿದರೂ ದೇಶದ ಉದ್ದಗಲಲ್ಲಿ ಜನರು ಸಂಪೂರ್ಣ ತಿರಸ್ಕಾರ ಮಾಡಿದ್ದಾರೆ. ಬಿಜೆಪಿಯವರು ಅಗ್ರೆಸ್ಸಿವ್ ಆಗಿ ಮಾತನಾಡ್ತಿಲ್ಲ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದ ವಿರುದ್ಧ ನಮ್ಮ ಪಕ್ಷದವರು ಎಲ್ಲರೂ ಮಾತನಾಡುತ್ತಾರೆ. ಇದಕ್ಕಿಂತ ಅಗ್ರೇಸ್ಸಿವ್ ಇನ್ನೇನು ಹೇಳಬೇಕೆಂದು ಸಚಿವ ಮಾಧುಸ್ವಾಮಿಗೆ ಸಚಿವ ಅಶ್ವತ್ಥ ನಾರಾಯಣ್ ಪರೋಕ್ಷವಾಗಿ ಪ್ರಶ್ನೆ ಮಾಡಿದರು.
ಲೋಕಾಯುಕ್ತ ಅಧಿಕಾರ ಹಿಂದೆ ಪಡೆದವರು ಸಿದ್ದರಾಮಯ್ಯ: ಸಿದ್ದರಾಮಯ್ಯ ಅಂದ್ರೆ ಭ್ರಷ್ಟಾಚಾರ, ಡಿ. ಕೆ ಶಿವಕುಮಾರ್ ಅಂದ್ರೆ ಸರ್ವಿಸ್ ಅಗೇನೆಸ್ಟ್ ಪೇಮೆಂಟ್, ಲೋಕಾಯುಕ್ತ ಹಿಂದೆ ಪಡೆದ ಮಹಾನ್ ವ್ಯಕ್ತಿ ಸಿದ್ದರಾಮಯ್ಯನವರು. ಸಿಎಂ ಆಗಿದ್ದಾಗ ತಮ್ಮನ್ನು ತಾವು ರಕ್ಷಣೆ ಮಾಡಲು ಅವರು ಮಾಡಿದ ತಪ್ಪಿನಿಂದ ಭ್ರಷ್ಟಾಚಾರ ರಕ್ಷಣೆ ಮಾಡಬೇಕು ಅಂತಾ ಲೋಕಾಯುಕ್ತದ ಅಧಿಕಾರವನ್ನು ಹಿಂಪಡೆದವರು ಸಿದ್ದರಾಮಯ್ಯನವರು.
ಇಂತಹ ಘನಕಾರ್ಯ ಮಾಡಿದೀಯಾ ಮಹಾನುಭಾವ ಅಂತಾ ಕೋರ್ಟ್‌ನಿಂದ ಛೀಮಾರಿ ಹಾಕಿದ್ದಾರೆ. ಈ ಭ್ರಷ್ಟಾಚಾರ ಪಕ್ಷಕ್ಕೆ ಏನ್ ಹೇಳ್ತೀರಾ ಸೆಂಟ್ರಲ್‌ನಲ್ಲಿ ಕಾಂಗ್ರೆಸ್ ಮಾಲೀಕರು ಬೇಲ್‌ನಲ್ಲಿ ಅಡ್ಡಾಡುತ್ತಿದ್ದಾರೆ. ಬೇಲ್‌ನಲ್ಲಿ ಓಡಾಡುವ ನಾಯಕರ ಕುಟುಂಬ ಬೇರೆ ಕೆಪಿಸಿಸಿ ಅಧ್ಯಕ್ಷರು ಬೇಲ್‌ನಲ್ಲಿ ಓಡಾಡುತ್ತಿದ್ದಾರೆ. ಈ ಬೇಲ್ ಪಾರ್ಟಿ ಬಗ್ಗೆ ಏನು ಹೇಳುತ್ತೀರಾ? ಎಂದು ಕಾಂಗ್ರೆಸ್ ಪಕ್ಷದ ಕಾಲು ಎಳೆದರು.
ಕಾಂಗ್ರೆಸ್ ನವರಿಗೆ ಪ್ರೊಟೆಸ್ಟ್ ಮಾಡಲು ಅಧಿಕಾರ ಇಲ್ಲ : ಕಾಂಗ್ರೆಸ್ ನವರಿಗೆ ಪ್ರೊಟೆಸ್ಟ್ ಮಾಡಲು ಅಧಿಕಾರವಿಲ್ಲ. ಅವರು ಫ್ರೀಡಂ ಪಾರ್ಕ್‌ನಲ್ಲಿ ಕುಳಿತುಕೊಳ್ಳಬೇಕು. ನಾಟಕ ಕಂಪನಿ ಅಂದ್ರೆ ಕಾಂಗ್ರೆಸ್ ಎಂದು ಹೇಳಿದರು.
ಪ್ರಜಾದ್ವನಿ ಕಾಂಗ್ರೆಸ್ ಸಮಾವೇಶ ವಿಚಾರ: ಬಸ್‌ನಲ್ಲಿ ಎಷ್ಟು ಜನ ಓಡಾಡುತ್ತಿದ್ದಾರಲ್ಲ ಅಷ್ಟೇ ಸೀಟ್ ಬರೋದು. ಏನು ಹೊಡೆದಾಡಿದರೂ ಬಸ್‌ನಲ್ಲೇ ಹೊಡೆದಾಡಿಕೊಳ್ಳಲಿ ಅಂತಾ ಮಾಡಿದ್ದಾರೆ. ಬಸ್ ನಲ್ಲಿ 50 ಒಳಗೆ ಸೀಟ್ ಇರಬೇಕು ಅಷ್ಟೇ ಸೀಟ್ ಬರಬಹುದು.
ಸಿಎಂಗೆ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಆಹ್ವಾನ ವಿಚಾರ: ಸದನದಲ್ಲಿಯೇ ಮಾತನಾಡಲ್ಲ, ಇನ್ನು ಬಹಿರಂಗ ಚರ್ಚೆ ಏನು? ಬೆಳಗಾವಿಯಲ್ಲಿ ನಡೆದ ಸದನದಲ್ಲಿ ಏನೂ ವಿಷಯ ಪ್ರಸ್ತಾವನೆ ಮಾಡಲಿಲ್ಲ. ಬೆಳಗಾವಿಯ ಅಧಿವೇಶನದಲ್ಲಿ ಸುಮ್ಮನೆ ಕುಳಿತಿದ್ರು. ಆವಾಗ ಮಾತನಾಡದವರು ಈಗೇನು ಮಾತನಾಡುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಕರಾವಳಿ, ಮಲೆನಾಡು ಭಾಗಕ್ಕೆ 2500 ಕೋಟಿ ನೀಡ್ತೀವಿ ಎಂಬ ಕಾಂಗ್ರೆಸ್ ಭರವಸೆ ವಿಚಾರ: ಕರಾವಳಿ, ಮಲೆನಾಡಿನಲ್ಲಿ ಇವರು ಏನ್ ಹೇಳಿದ್ರೂ ಜನರು ನಂಬುವುದಿಲ್ಲ. ಇವರು ಅಲ್ಲಿ ಕಂಪ್ಲೀಟಲಿ ರಿಜೆಕ್ಟೆಡ್ ಅಲ್ಲಿ ನಾಯಕರು ಇಲ್ಲ, ಇವರ ಬಾವುಟ ಹಿಡಿಯಲು ಕಾರ್ಯಕರ್ತರು ಇಲ್ಲ. ಕರಾವಳಿಯಲ್ಲಿ ಸಂಪೂರ್ಣ ವಾಶ್‌ಔಟ್ ಆಗಿರುವ ಪಕ್ಷ ಕಾಂಗ್ರೆಸ್. ಅಲ್ಲಿ ಪಾಪ ಅವರ ಧ್ವನಿ ಕೇಳೋರು ಇಲ್ಲ. ಪ್ರಜಾ ಯಾತ್ರೆಯೂ ಇಲ್ಲ. ಪ್ರಜಾಧ್ವನಿಯೂ ಇಲ್ಲ. ಅಲ್ಲಿ ಅಡ್ರೆಸ್ ಇಲ್ಲ. ಕರಾವಳಿ, ಮಲೆನಾಡು ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಏನೂ ನೆಲೆ ಇಲ್ಲ. 33 ಕ್ಷೇತ್ರದಲ್ಲಿ 28 ಸೀಟ್ ಬಿಜೆಪಿ ಇದೆ. ಈ ಬಾರಿ 33 ಕ್ಷೇತ್ರ ಬಿಜೆಪಿ ಗೆಲ್ಲುತ್ತೆ ಎಂದು ಸಚಿವ ಅಶ್ವತ್ಥನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.
ಓದಿ : ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದಿಂದ ರಾಜ್ಯ ಹಾಗೂ ದೇಶವನ್ನು ಹಾಳು ಮಾಡುತ್ತಿವೆ: ಹೆಚ್ ಡಿ ಕುಮಾರಸ್ವಾಮಿ