ಬೆಳಗಾವಿ: ಹಿಂದೂ ಘಟನೆಯಲ್ಲಿ ಗುರುತಿಸಿಕೊಂಡಿದ್ದ ಯುವಕನ ಸಾವು ಪ್ರಕರಣದ ತನಿಖೆ ನಡೆಸುವಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಉಪವಿಭಾಗ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ಪ್ರಮೋದ ಮುತಾಲಿಕ್, ಮೇ. 25 ರಂದು ಶಿವು ಉಪ್ಪಾರ ಎಂಬ ಯುವಕ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾನೆ. ಘಟನೆ ನಡೆದು ಒಂದು ವಾರವಾಗಿದೆ. ಇದು ಆತ್ಮಹತ್ಯೆ ಎಂದು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದ್ದಾರೆ.
ಆದರೆ ಆಡಿಯೋ, ವಿಡಿಯೋ ಸಂಭಾಷಣೆಯಲ್ಲಿ ಈ ಸಂಬಂಧ ಉಲ್ಲೇಖ ಇದೆ. ಯಾವುದೇ ಪರಿಸ್ಥಿತಿಯಲ್ಲೂ ಮುಚ್ಚಿ ಹಾಕಲು ಆಗುವುದಿಲ್ಲ. ದಯವಿಟ್ಟು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕೊಲೆಗಾರರನ್ನು ಬಂಧಿಸಿ ಸತ್ಯವನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಪ್ರಕರಣ ಮುಚ್ಚಿ ಹಾಕಲು ಯತ್ನಿಸಬಾರದು. ಇದನ್ನು ಶ್ರೀರಾಮ ಸೇನೆ ಸಹಿಸುವುದಿಲ್ಲ. ರಾಜ್ಯದಾದ್ಯಂತ ಹೋರಾಟ ನಡೆಸುವ ಮುನ್ನವೇ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿ ಸಮಗ್ರ ತನಿಖೆ ನಡೆಸಬೇಕು. ಅಷ್ಟೇ ಅಲ್ಲದೆ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಹಣ ನೀಡಬೇಕು ಎಂದು ಆಗ್ರಹಿಸಿದರು.