ಬೆಳಗಾವಿ: ಪಿಯು ಮೌಲ್ಯಮಾಪಕರಿಗೆ ಮತ್ತು ಸಿ ವರ್ಗದವರಿಗೆ ಆರೋಗ್ಯ ಸುರಕ್ಷಾ ಕ್ರಮ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ವತಿಯಿಂದ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮೂಲಕ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಮನವಿ ಮಾಡಿಕೊಂಡ ಪದಾಧಿಕಾರಿಗಳು, ಮೇ 29ರಿಂದ ನಡೆಯುವ ರಾಜ್ಯದ 43 ಕೇಂದ್ರದ ಮೌಲ್ಯಮಾಪಕರಿಗೆ ಕೊರೊನಾ ಸೋಂಕು ತಗುಲದಂತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಈ ವೇಳೆ, ಕರ್ನಾಟಕ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಮೂಕನವರ ಮಾತನಾಡಿ, ಪ್ರತಿ ಮೌಲ್ಯಮಾಪನ ಕೇಂದ್ರದಲ್ಲಿ ಮೌಲ್ಯ ಮಾಪನ ಮುಗಿಯುವರೆಗೂ ವೈದ್ಯರು ತಪಾಸಣೆ ನಡೆಸಬೇಕು.
ಕಂಟೇನ್ಮೆಂಟ್ ವಲಯದಲ್ಲಿ ಮೌಲ್ಯಮಾಪನ ಕೇಂದ್ರ ರದ್ದುಗೊಳಿಸಿ, ಬೇರೆ ಕಡೆಗೆ ಮೌಲ್ಯಮಾಪನ ಕೇಂದ್ರ ತೆರೆಯಬೇಕು. ಆಹಾರದ ವ್ಯವಸ್ಥೆ ಮತ್ತು ಸಾರಿಗೆ ವ್ಯವಸ್ಥೆ ಮಾಡಿಕೊಡಬೇಕು. ಶಿಕ್ಷಣ ಇಲಾಖೆಯವರು ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಹಾಕಬೇಕು.
50 ವರ್ಷ ಮೀರಿದ ಮತ್ತು ಖಾಯಿಲೆಯಿಂದ ಬಳಲುತ್ತಿರುವವರಿಗೆ ಉಪನ್ಯಾಸಕರಿಗೆ ವಿನಾಯತಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದರು.
ಕರ್ನಾಟಕ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಸಿದರಾಯಿ ಶೀಗಿಹಳ್ಳಿ, ಯುವ ಘಟಕದ ರಾಜ್ಯಾಧ್ಯಕ್ಷ ಕುಮಾರ ಮಹೇಶ್ ಶೀಗಿಹಳ್ಳಿ ಉಪಸ್ಥಿತರಿದ್ದರು.