ಬೆಳಗಾವಿ: ಕರ್ನಾಟಕದ ಮೇಲೆ ಪ್ರಧಾನಿ ನರೇಂದ್ರ ಮೋದಿಗೆ ಮೊದಲಿನಿಂದಲೂ ಪ್ರೀತಿ ಕಡಿಮೆಯಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾತನಾಡಿ, ದಕ್ಷಿಣ ಭಾರತದಲ್ಲಿ ಬಿಜೆಪಿ ನೆಲೆ ಇರುವುದೇ ಕರ್ನಾಟಕದಲ್ಲಿ. ಆದರೂ, ಪ್ರವಾಹದ ಸಂದರ್ಭದಲ್ಲಿ ಕರ್ನಾಟಕಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ಬರಲಿಲ್ಲ, ಕೇವಲ ಭಾಷಣ ಮಾಡ್ತಿದ್ದಾರಷ್ಟೇ. ಸಿಎಂ ಆದಿಯಾಗಿ ಪರಿಹಾರ ನೀಡುವಂತೆ ಕೋರಿದ್ರೂ, ಮೋದಿ ಪರಿಹಾರ ಕೊಡಲಿಲ್ಲ. ಹಾನಿಯಾಗದ ಅನೇಕ ರಾಜ್ಯಗಳು ಪರಿಹಾರವನ್ನೇ ಕೇಳಿರಲಿಲ್ಲ. ಅಂತಹ ರಾಜ್ಯಗಳಿಗೆ ಪರಿಹಾರ ನೀಡಿ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಲಾಗಿದೆ. ಮೊದಲಿನಿಂದಲೂ ಕರ್ನಾಟಕದ ಮೇಲೆ ಮೋದಿಗೆ ಪ್ರೀತಿಯಿಲ್ಲ ಎಂದು ದೂರಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ ವಿವಾದ ಸ್ಥಳೀಯ ಮಟ್ಟದ್ದು. ಮಹಾರಾಷ್ಟ್ರದ ಮಾಧ್ಯಮಗಳು ಈ ಸುದ್ದಿಯನ್ನು ತಿರುಚಿ ಪ್ರಚೋದಿಸುತ್ತಿವೆ. ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯರೇ ಬಗೆಹರಿಸಿಕೊಳ್ಳುತ್ತಾರೆ. ಸರ್ಕಾರಿ ಜಾಗದಲ್ಲಿ ಏಕಾಏಕಿ ಪುತ್ಥಳಿ ನಿರ್ಮಿಸಿದಕ್ಕೆ ವಿರೋಧ ವ್ಯಕ್ತವಾಗಿದೆ. ಸಮಸ್ಯೆ ಬಗೆಹರಿಸಲು ಮುಂಬೈ, ದೆಹಲಿ ನಾಯಕರು ಬರುವ ಅವಶ್ಯಕತೆಯಿಲ್ಲ. ನಾವೇನು ಪುತ್ಥಳಿ ತೆರುವುಗೊಳಿಸಿಲ್ಲ, ಪ್ರತಿಷ್ಠಾಪಿಸಿದವರೇ ಪುತ್ಥಳಿ ತೆಗೆದುಕೊಂಡು ಹೋಗಿದ್ದಾರೆ. ಶಿವಸೇನೆ ಹಾಗೂ ಎಂಇಎಸ್ ಮೊದಲಿನಿಂದಲೂ ಭಾಷಾ ರಾಜಕಾರಣ ಮಾಡುತ್ತಾ ಬಂದಿವೆ. ಕರಾಳ ದಿನ ಆಚರಿಸಿ ಭಾಷಾ ಸೌಹಾರ್ಧತೆಗೆ ಧಕ್ಕೆ ತರುತ್ತಿದ್ದಾರೆ. ಶಿವಾಜಿ ಕೇವಲ ಮಹಾರಾಷ್ಟ್ರಕ್ಕೆ ಸಿಮೀತವಲ್ಲ. ಇಡೀ ದೇಶದ ಜನರೇ ಶಿವಾಜಿ ಮಹಾರಾಜರ ಬಗ್ಗೆ ಗೌರವ ಹೊಂದಿದ್ದಾರೆ. ನಮ್ಮ ಸರ್ಕಾರದಿಂದ ಶಿವಾಜಿ ಜಯಂತಿ ಆಚರಿಸಲಾಗುತ್ತಿದೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.
ನಾಲ್ವರು ಮಂತ್ರಿಗಳಿದ್ದರೂ ನಿಷ್ಪ್ರಯೋಜಕ :
ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಗೆ ನಾಲ್ವರು ಸಚಿವರಿದ್ದರೂ ಪ್ರಯೋಜನವಾಗುತ್ತಿಲ್ಲ. ಕೋವಿಡ್, ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಜವಾಬ್ದಾರಿ ಅರಿತು ನಾಲ್ವರು ಕೆಲಸ ಮಾಡಬೇಕಿದೆ. ಡಿಸಿಎಂ ಸವದಿ ಸೇರಿ ನಾಲ್ವರು ಸಚಿವರಿದ್ದಾರೆ. ಜಂಟಿಯಾಗಿ ಸಭೆ ನಡೆಸಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕು. ಆದ್ರೆ, ಬೆಳಗಾವಿಯ ನಾಲ್ಕು ಮಂತ್ರಿಗಳು ನಾಲ್ಕು ಧಿಕ್ಕಿನಲ್ಲಿ ಹೊಂಟಿದ್ದಾರೆ ಎಂದು ಹೇಳಿದರು.