ಬೆಳಗಾವಿ: ನನ್ನ ಗಂಡನ ಸಾವಿನ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪನವರು ಪೊಲೀಸರ ಮೇಲೆ ಪ್ರಭಾವ ಬೀರುತ್ತಿದ್ದಾರೆ.ಹೀಗಾಗಿ ಸಿಬಿಐ ತನಿಖೆ ಆಗಬೇಕು ಎಂದು ಮೃತ ಸಂತೋಷ್ ಪಾಟೀಲ ಪತ್ನಿ ಜಯಶ್ರೀ ಆಗ್ರಹ ಮಾಡಿದ್ದಾರೆ.
ತಾಲೂಕಿನ ಬಡಸ ಗ್ರಾಮದಲ್ಲಿ ಮಾತನಾಡಿದ ಅವರು, ನನ್ನ ಪತಿ ಸಾವಿಗೆ ಈಶ್ವರಪ್ಪ ಕಾರಣ ಅಂತಾ ಅವರೇ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಗಂಡನ ಫೋನ್ ನಾಲ್ಕು ಗಂಟೆ ಆನ್ ಇತ್ತು.ಅದರಲ್ಲಿ ಸಾಕ್ಷಿಗಳೂ ಇದ್ದವು. ಕಾಮಗಾರಿ ಮಾಡಿರುವ ಬಗ್ಗೆ ಗ್ರಾಮ ಪಂಚಾಯತಿ ಅಧ್ಯಕ್ಷರು ಹೇಳಿದ್ದರು. ಆದರೀಗ ಪ್ರಭಾವಿ ರಾಜಕಾರಣಿ ಒತ್ತಡಕ್ಕೆ ಸಿಕ್ಕ ಪೊಲೀಸರು ಪ್ರಕರಣ ತಿರುಗಿಸುತ್ತಿದ್ದಾರೆ ಎಂದರು.
ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಗಂಡ ಬರೆದ ಡೆತ್ನೋಟ್ ಅನ್ನು ಪರಿಗಣಿಸಬೇಕು. ವಾಟ್ಸಪ್ನಲ್ಲಿ ಬರೆದಿದ್ದಾರೆ ಅಂತಾ ಪೊಲೀಸರು ಹೇಳ್ತಿದ್ದಾರೆ. ಆದರೀಗ ನಾನು ಕೂಡ ನನ್ನ ಗಂಡನ ಸಾವಿಗೆ ಈಶ್ವರಪ್ಪನವರು ಕಾರಣ ಅಂತಾ ಕೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸಾಯುತ್ತೇನೆ. ಅದನ್ನಾದರೂ ಪೊಲೀಸರು ಒಪ್ಪುತ್ತಾರಾ?.ಸತ್ಯಾಸತ್ಯೆತೆ ಹೊರಬರಬೇಕಾದರೆ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಈಶ್ವರಪ್ಪನವರು ಪ್ರಭಾವ ಬಳಸಿದ್ದಾರೆ. ಅದಕ್ಕಾಗಿಯೇ ಪೊಲೀಸರು ಸಾಕ್ಷಿ ಇಲ್ಲ ಅಂತಿದ್ದಾರೆ. ಅವರ ಪರವಾಗಿಯೇ ತನಿಖೆ ಆಗ್ತಿದೆ ಅಂತಾ ಅನುಮಾನ ಬಂದು ನಾವು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ತನಿಖಾಧಿಕಾರಿಗಳು ಹತ್ತು ದಿನಗಳಲ್ಲಿ ಮೂರು ನೋಟಿಸ್ ಕೊಟ್ಟಿದ್ದಾರೆ. ನಾವು ಫೋನ್ ಮಾಡಿದ್ರು ಯಾರು ನಮ್ಮ ಫೋನ್ ರಿಸಿವ್ ಮಾಡಿಲ್ಲ. ನ್ಯಾಯಯುತವಾಗಿ ತನಿಖೆ ಆಗಲಿ ನನ್ನ ಗಂಡನಿಗೆ ನ್ಯಾಯ ಸಿಗಲಿ ಅಂತಾ ಮನವಿ ಮಾಡಿದರು.
ಆಡಳಿತ ಪಕ್ಷ ನ್ಯಾಯಯುತವಾಗಿ ನಡೆದುಕೊಳ್ಳಬೇಕು.ಆದ್ರೆ, ಸರ್ಕಾರ ನ್ಯಾಯಯುತವಾಗಿ ನಡೆದುಕೊಳ್ಳುತ್ತಿಲ್ಲ.ಈಶ್ವರಪ್ಪನವರ ಪರವಾಗಿಯೇ ತನಿಖೆ ನಡೆಯುತ್ತಿದ್ದು, ಅದೀಗ ನಿಜವಾಗಿದೆ. ನಮಗೆ ಮೀಡಿಯಾದಲ್ಲಿ ಬಂದಾಗ ಗೊತ್ತಾಗಿದೆ. ನಮಗೂ ಒಂದು ಲೆಟರ್ ಕೊಡಬೇಕಿತ್ತು. ಎಲ್ಲಿಯೂ ಈಶ್ವರಪ್ಪರನ್ನು ತನಿಖೆಗೆ ಒಳಪಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಮಗಾರಿ ನಡೆಯದಿರುವ ಬಗ್ಗೆ ಯಾರೇ ಅಧಿಕಾರಿಗಳು ಪರಿಶೀಲನೆ ಮಾಡಿಲ್ಲ. ಸರ್ಕಾರಿ ಕಾಮಗಾರಿಗಳು ಮಾಡುವ ಸಂದರ್ಭದಲ್ಲಿ ಅನುಮತಿ ಇರುವ ಬಗ್ಗೆ ಯಾರಾದರೂ ನೋಟಿಸ್ ಕೊಟ್ಟು ಕೆಲಸವನ್ನು ಬಿಡಿಸಬೇಕಿತ್ತು.ಅದನ್ನು ಯಾಕೆ ಮಾಡಲಿಲ್ಲ.ಎಲ್ಲರೂ ಆಗ ಕಣ್ಮುಚ್ಚಿ ಕುಳಿತಿದ್ದರು.ಈ ವ್ಯವಸ್ಥೆಯಲ್ಲೇ ತಪ್ಪಿದೆ ಎಂದರು.
ಈಶ್ವರಪ್ಪ ಹೇಳಿರುವ ಹಾಗೆ ಕೀಳಿರುವ ಪೊಲೀಸರು: ಸದ್ಯ ಈಶ್ವರಪ್ಪ ತಮ್ಮ ಪ್ರಭಾವ ಬಳಿಸಿಕೊಂಡು ತನಿಖೆಯನ್ನು ತಮ್ಮಕಡೆ ಮಾಡಿಕೊಂಡಿದ್ದಾರೆ. ಪೊಲೀಸಿನವರು ಈಶ್ವರಪ್ಪ ಹೇಳಿದ ಹಾಗೆ ಕೇಳಿ 'ಬಿ' ರಿಪೋರ್ಟ್ ಮಾಡಿದ್ದಾರೆ. ನಮಗೆ ನ್ಯಾಯ ಕೊಡಲೇಬೇಕು.
ನನ್ನ ಗಂಡ ಕಾಮಗಾರಿ ಮಾಡಿಸಿದ್ದು ನಿಜ.ಈಶ್ವರಪ್ಪ 40%ಕಮಿಷನ್ ಕೇಳಿದ್ದು ನಿಜ.ನನ್ನ ಗಂಡ ದುಡ್ಡು ಹೊಂದಿಸುತ್ತಿದ್ದರು.ಆರ್ಡಿಪಿಆರ್ ಇಲಾಖೆ ಶ್ರೀನಿವಾಸ ಎಂಬುವವರಿಗೆ ಹತ್ತು ಲಕ್ಷ ಹಣ ಕೊಟ್ಟಿದ್ದಾರೆ. ನನ್ನ ಗಂಡನನ್ನು ಕಳೆದುಕೊಂಡು ಮೂರು ತಿಂಗಳಾಗಿದೆ. ನಮನ್ನು ಅನಾಥ ಮಾಡಿದ್ದಾರೆ. ಈ ಸರ್ಕಾರ ನನಗೆ ನ್ಯಾಯ ಕೊಡಿಸುತ್ತಿಲ್ಲ ಎಂದು ಕಣ್ಣೀರು ಹಾಕಿದರು.
ಸಚಿವರ ಪರಿಹಾರದ ಭರವಸೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಲ್ಲಿಯವರೆಗೂ ಏನು ಚರ್ಚೆ ಆಗಿಲ್ಲ.ಸಾಕಷ್ಟು ಭರವಸೆ ಕೊಟ್ಟಿದ್ದರು.ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ನನ್ನ ಗಂಡ ಕಾಮಗಾರಿಗೆ ಜೀವ ಕೊಟ್ಟಿದ್ದಾರೆ.ಅದರ ಪರಿಹಾರವೂ ಬಂದಿಲ್ಲ.
ರಾಜಕೀಯಕ್ಕಾಗಿ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ನ್ಯಾಯ ಸಿಗಲಿಲ್ಲ ಅಂದ್ರೆ ಪ್ರದಾನಿ ಮೋದಿ ಬಳಿಗೆ ಹೋಗುತ್ತೇನೆ. ಈಶ್ವರಪ್ಪ ವಿರುದ್ಧ ಕ್ರಮ ಆಗಬಹುದು ಎಂದು ಭರವಸೆ ಇತ್ತು. ಆದರೀಗ ಬಿ ರಿಪೋರ್ಟ್ ನೋಡಿದ್ಮೇಲೆ ಸುಳ್ಳಾಗಿದೆ.ಆದ್ರೆ, ನಾವು ಇದನ್ನ ಒಪ್ಪುವುದಿಲ್ಲ. ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆ : ಆರೋಪದಿಂದ ಮುಕ್ತನಾಗಿದ್ದೇನೆ ಎಂದ ಈಶ್ವರಪ್ಪ