ಬೆಳಗಾವಿ: ಯಾವುದೇ ಕಚೇರಿಗಳಿಲ್ಲದೇ ಕೇವಲ ಅಧಿವೇಶನಕ್ಕೆ ಮಾತ್ರ ಸೀಮಿತವಾಗಿರುವ ಬೆಳಗಾವಿ ಸುವರ್ಣ ಸೌಧಕ್ಕೆ ಅತೀ ಶೀಘ್ರವಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಆರು ಕಚೇರಿ ಸ್ಥಳಾಂತರ ಮಾಡಲಾಗುವುದು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಇಂದು ನಗರದ ಸುವರ್ಣ ಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ, ಅನೇಕ ದಿನಗಳಿಂದ ಬೆಳಗಾವಿಯ ಸುವರ್ಣ ಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು ಎಂಬ ಕೂಗು ಕೇಳಿಬರುತ್ತಿತ್ತು. ಈ ನಿಟ್ಟಿನಲ್ಲಿ ಒಂದು ಸಭೆಯನ್ನು ನಡೆಸಿ ತಮ್ಮ ಇಲಾಖೆಗೆ ಒಳಪಡುವ ಸುಮಾರು ಆರು ಕಚೇರಿಗಳನ್ನು ಸ್ಥಳಾಂತರ ಮಾಡಲಾಗುವುದು. ಜೊತೆಗೆ ದಕ್ಷಿಣ ಕರ್ನಾಟಕದ ಜನತೆಗೆ ಅನುಕೂಲವಾಗುವ ಬೆಂಗಳೂರಿನ ಕಚೇರಿಗಳಿಗೆ ಯಾವುದೇ ಅಡಚಣೆ ಆಗದೆ. ಉತ್ತರ ಕರ್ನಾಟಕದ ಯೋಜನೆಗೆ ಬೆಳಗಾವಿಯಲ್ಲಿ ಅನುಮೋದನೆ ಸಿಗುವ ಹಾಗೆ ಒಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದರು.
ಕುಡಿಯುವ ನೀರು, ರಸ್ತೆ ಸಂಪರ್ಕ, ಉದ್ಯೋಗ ಖಾತ್ರಿ ಹಗೂ ಗ್ರಾಮೀಣಾಭಿವೃದ್ಧಿ ಸೇರಿದಂತೆ ಕಚೇರಿ ಸ್ಥಳಾಂತರ ಮಾಡಲಾಗುತ್ತದೆ. ಆಡಳಿತಾತ್ಮಕ ಹಾಗೂ ಆರ್ಥಿಕ ಅಧಿಕಾರ ತೆಗೆದುಕೊಳ್ಳುವ ಅಧಿಕಾರಿ ನೇಮಕ ಮಾಡಲಾಗುತ್ತದೆ. ಕಚೇರಿ ಸ್ಥಳಾಂತರ ಮಾಡುವುದಕ್ಕೆ ಕೆಲವೊಂದು ತಾಂತ್ರಿಕ ತೊಂದರೆಗಳಿದ್ದು ಅವುಗಳನ್ನು ಬಗೆಹರಿಸಿಕೊಂಡು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕ ಆಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಅಭಿಪ್ರಾಯಪಟ್ಟರು.