ಚಿಕ್ಕೋಡಿ: ಕುಟುಂಬ ನಿರ್ವಹಣೆ ಜೊತೆಗೆ ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳಲು ರೊಟ್ಟಿ ತಯಾರಿಸುವ ಉದ್ಯೋಗ ಪ್ರಾರಂಭಿಸಿದ ಮಹಿಳೆಯೊಬ್ಬರು ಇಂದು 50ಕ್ಕೂ ಹೆಚ್ಚು ಮಹಿಳೆಯರಿಗೆ ಅನ್ನದ ದಾರಿ ಕಲ್ಪಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಗೊಂಜಾಳ ರೊಟ್ಟಿ, ಅಕ್ಕಿ ರೊಟ್ಟಿ.. ಹೀಗೆ ಹಲವಾರು ತರಹೇವಾರಿ ರೊಟ್ಟಿಗಳನ್ನು ತಿನ್ನಬಹುದು. ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ರೊಟ್ಟಿ ಮಾಡುವುದನ್ನು ಕಸುಬು ಮಾಡಿಕೊಂಡು ಜೀವನ ಸಾಗಿಸುತ್ತಿವೆ.
ಹಾರೂಗೇರಿ ಪಟ್ಟಣದ ನಿವಾಸಿ ಮಹಾದೇವಿ ಮಲ್ಲಪ್ಪ ಕಬ್ಬೂರ ಸುಮಾರು 50 ಕುಟುಂಬಗಳಿಗೆ ರೊಟ್ಟಿ ಮಾಡಿ ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಟ್ಟಿದ್ದಾರೆ. ಪ್ರಾರಂಭದಲ್ಲಿ ಇವರೊಬ್ಬರೇ ರೊಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದರಂತೆ. ಈಗ ಇವರ ಜೊತೆ ಐವತ್ತು ಮಹಿಳೆಯರು ರೊಟ್ಟಿ ಮಾಡುತ್ತಿದ್ದಾರೆ. ರೊಟ್ಟಿ ತಟ್ಟುವುದರಲ್ಲಿ ಗಟ್ಟಿಯಾದ ಮಹಾದೇವಿ ಹಲವಾರು ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಇದ್ರ ಜೊತೆಗೆ ಶೇಂಗಾ ಹೋಳಿಗೆ, ಏಳೆಂಟು ತರಹದ ಉಪ್ಪಿನಕಾಯಿ ಪ್ರಮುಖವಾಗಿ ಮೊಸರು ಮೆಣಸಿನಕಾಯಿ, ಹಪ್ಪಳ ಇವೆಲ್ಲವೂ ಕೂಡಾ ಇವರ ಅಂಗಡಿಯಲ್ಲಿ ಸಿಗುತ್ತವೆ.
ಇವರು ತಯಾರಿಸುವಂತಹ ರೊಟ್ಟಿಗಳು ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು.. ಹೀಗೆ ಇತರೆ ಬೇರೆ ರಾಜ್ಯಗಳಲ್ಲೂ ಪ್ರಖ್ಯಾತಿ ಪಡೆದುಕೊಂಡಿವೆ. ವಿದೇಶದಲ್ಲಿ ವಾಸಿಸುತ್ತಿರುವ ಕರ್ನಾಟಕ-ಮಹಾರಾಷ್ಟ್ರ ಜನರು ಇವರು ತಯಾರಿಸುವ ರೊಟ್ಟಿಯನ್ನು ತೆಗೆದುಕೊಂಡು ಹೋಗ್ತಾರಂತೆ.