ಬೆಳಗಾವಿ : ಬೆಳಗಾವಿ ನಗರ ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದಲ್ಲಿ ಬೆಳೆಯುತ್ತಿದೆ. ಕಾಂಕ್ರೀಟ್ ಕಾಡುಗಳು ಎಲ್ಲೆಂದರಲ್ಲಿ ತಲೆ ಎತ್ತಿ ನಿಲ್ಲುತ್ತಿವೆ. ಅದರಂತೆ ನಗರಕ್ಕೆ ಸೇರುವ ಅನೇಕ ರಸ್ತೆಗಳು ಹಿರಿದಾಗುತ್ತಾ ತನ್ನ ಅಂದ ಹೆಚ್ಚಿಸಿಕೊಳ್ಳುತ್ತಿವೆ. ಆದ್ರೆ ರಸ್ತೆ ಅಗಲೀಗರಣ ಮಾಡುವಾಗ ರಸ್ತೆ ಬದಿಯಲ್ಲಿದ್ದ 60ಕ್ಕೂ ಹೆಚ್ಚು ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತದೆ ಅಂತ ಎಲ್ಲರು ಅಂದುಕೊಂಡಿದ್ರು. ಆದ್ರೆ ಅಲ್ಲಿ ನಡೆದಿದ್ದೇ ಬೇರೆ.
ಹೌದು ಬೆಳಗಾವಿ ನಗರದ ಬಾಕ್ಸೈಟ್-ಟಿಬಿ ಸೆಂಟರ್ನ 1.5 ಕಿಮೀ ರಸ್ತೆ ಅಗಲಿಕರಣ ಕಾರ್ಯ ನಡೆಯುತ್ತಿದ್ದು ಸುಮಾರು 60 ಕ್ಕೂ ಅಧಿಕ ಮರಗಳನ್ನು ನೆಲಸಮ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಮರಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ನಗರದ ಪಿರನವಾಡಿಯ ಹೊಸ ಕೆರೆಯ ಬಳಿಗೆ ರವಾನಿಸಿ ಮರಗಳನ್ನು ನೆಡಲಾಗಿದ್ದು, ಇಂದು ಆ ಮರಗಳು ಜೀವಂತವಾಗಿ ನಳನಳಿಸುತ್ತಿವೆ.
ಹೇಗಿತ್ತು ಮರ ಸ್ಥಳಾಂತರ ಕಾರ್ಯ: ಮೊದಲು ಮರದ ಎಲ್ಲಾ ಕೊಂಬೆಗಳನ್ನು ಕಟಾವು ಮಾಡಲಾಗುತ್ತದೆ. ಕಟಾವು ಮಾಡಿದ ಕೊಂಬೆಗಳು ಜೀವ ಕಳೆದುಕೊಳ್ಳದಂತೆ ದ್ರವರೂಪದ ಔಷಧಿ ಲೇಪಿಸಲಾಗುತ್ತದೆ. ನಂತರ ಮರದ ಸುತ್ತ 2 ಮೀಟರ್ ಅಳತೆ ಬಿಟ್ಟು ಸುಮಾರು 6 ಅಡಿಯಷ್ಟು ಆಳ ಅಗೆದು ಬೇರನ್ನು ಬೇರ್ಪಡಿಸಲಾಗುತ್ತದೆ. ನಂತರ ಇದನ್ನು ಕ್ರೇನ್ ಮೂಲಕ ಬೇರೆಡೆ ಮರು ನಾಟಿ ಮಾಡಲಾಗುತ್ತದೆ.
ಮರಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿದರೆ ಅದಕ್ಕೆ ಕೆಲವು ದಿನಗಳ ಕಾಲ ಆರೈಕೆ ಮಾಡುತ್ತಾರೆ. ಸ್ಥಳಾಂತರಗೊಂಡ ಮರ ಜೀವ ಪಡೆದು ಹಸಿರಾಗುತ್ತದೆ. ಇಲ್ಲಿ ಮರ ತನ್ನ ಮೊದಲಿನ ಸ್ಥಿತಿ ಪಡೆಯುತ್ತದೆ.
ಒಟ್ಟಾರೆಯಾಗಿ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಮರಗಳಿಗೆ ಪಟ್ಟು ಬಿತ್ತಪ್ಪಾ ಅಂದು ಕೊಂಡಿದ್ದ ಜನರಿಗೆ ಬೆಳಗಾವಿ ಲೋಕೋಪಯೋಗಿ ಇಲಾಖೆ ಸಂತಸ ಮೂಡುವಂತೆ ಮಾಡಿದ್ದು, ಮರಗಳನ್ನು ಬೇರೆಡೆ ಸಾಗಿಸಿ ಜೀವ ಉಳಿಸಿದೆ.