ಚಿಕ್ಕೋಡಿ : ಚುನಾವಣೆಗೆ ಸ್ಪರ್ಧೆ ಮಾಡುವಂತೆ ಸಹೋದರ ರಮೇಶ್ ಜಾರಕಿಹೊಳಿ ಹೇಳಿಲ್ಲ. ಅವರು ಯಾಕೆ ನನ್ನನ್ನು ನಿಲ್ಲಿಸುತ್ತಾರೆ ಎಂದು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ದ್ವಂದ್ವ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಹೋದರ ರಮೇಶ್ ಜಾರಕಿಹೊಳಿ ದೇವಸ್ಥಾನಕ್ಕೆ ಬಂದಿದ್ದರು. ನಾನು ಕೂಡ ಕಾರ್ಯಕ್ರಮ ಮುಗಿಸಿ ಹೊರಟಿದ್ದೇನೆ. ಜಿಲ್ಲೆಯ ಮತದಾರರು ಜಾಣರಿದ್ದಾರೆ. ಯಾರಿಗೆ ಮತ ಹಾಕಬೇಕು ಎಂಬುದರ ಬಗ್ಗೆ ಚೆನ್ನಾಗಿ ಅರಿತಿದ್ದಾರೆ ಎಂದರು.
ನನಗೆ ಪ್ರಥಮ ಪ್ರಾಸಶ್ಯದ ಮತವನ್ನು ಹಾಕುವಂತೆ ಪ್ರಚಾರದ ವೇಳೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದೇನೆ. ಅಥಣಿ,ನಿಪ್ಪಾಣಿ, ಕಾಗವಾಡದಲ್ಲಿ ಉತ್ತಮ ವಾತಾವರಣವಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಬೇಕು ಎಂಬುದೇ ಏಕೈಕ ಉದ್ದೇಶವಿದೆ ಎಂದರು.
ನನಗೆ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಸಹೋದರ ರಮೇಶ್ ಜಾರಕಿಹೊಳಿ ಹೇಳಿಲ್ಲ. ಅವರು ಏಕೆ ನನ್ನನ್ನು ನಿಲ್ಲಿಸುತ್ತಾರೆ. ನಾವು ಮೊದಲೇ ರೆಡಿ ಆಗಿದ್ವಿ. ಮಾಜಿ ಎಂಎಲ್ಸಿ ವಿವೇಕರಾವ್ ಪಾಟೀಲ್ಗೆ ಕಾಂಗ್ರೆಸ್ ಮೋಸ ಮಾಡಿದೆ. ಅದಕ್ಕಾಗಿ ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ ಎಂದರು.
ಇದಕ್ಕೂ ಮೊದಲು ರಮೇಶ್ ಜಾರಕಿಹೊಳಿ ಅವರು ಲಖನ್ ಪರವಾಗಿ ಭರ್ಜರಿ ಪ್ರಚಾರ ಮಾಡಿದ್ದರು. ಈ ವೇಳೆ, ಸಹೋದರನಿಗೆ ಬೆಂಬಲಿಸುವಂತೆ ಮತದಾರರಲ್ಲಿ ರಮೇಶ್ ಮನವಿಯನ್ನೂ ಮಾಡಿದ್ದಲ್ಲದೆ ವೇದಿಕೆ ಭಾಷಣದಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಸಹೋದರ ಲಖನ್ ಜಾರಕಿಹೊಳಿ ಅವರನ್ನು ಚುನಾವಣೆಗೆ ನಿಲ್ಲಿಸಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಆದರೆ, ಲಖನ್ ಜಾರಕಿಹೊಳಿ ಮಾತ್ರ ರಮೇಶ್ ನನ್ನನ್ನು ನಿಲ್ಲಿಸಿಲ್ಲ ಎನ್ನುವ ಮೂಲಕ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡುವ ಮೂಲಕ ಜಾರಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಪರಿಷತ್ ಚುನಾವಣೆ ನಂತರ ಸಂಪುಟ ಪುನಾರಚನೆ.. ಬಿ ವೈ ವಿಜಯೇಂದ್ರಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ!?