ಬೆಳಗಾವಿ: ಮಾರ್ಚ್ 2ರಂದು ಬೆಳಗಾವಿಯ ರಾಜಹಂಸಗಡನಲ್ಲಿ ನಿರ್ಮಾಣವಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಿ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಮಾಜಿ ಸಚಿವ ಶಾಸಕ ರಮೇಶ್ ಜಾರಕಿಹೊಳಿ ಅವರು ತಿಳಿಸಿದರು.
ಬೆಳಗಾವಿ ನಗರದ ಬಿಜೆಪಿ ಕಚೇರಿಯಲ್ಲಿ ಮಾದ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜಹಂಸಗಡನಲ್ಲಿ ನಿರ್ಮಾಣವಾಗಿರುವ ಶಿವಾಜಿ ಮಹಾರಾಜರ ಮೂರ್ತಿಯನ್ನು ಸರ್ಕಾರಿ ಶಿಷ್ಟಾಚಾರದಂತೆ ಅತಿ ಸರಳವಾಗಿ ಮುಖ್ಯಮಂತ್ರಿ ಅವರು ಲೋಕಾರ್ಪಣೆ ಮಾಡುತ್ತಾರೆ. ಇದು ಬಿಜೆಪಿ ಕಾರ್ಯಕ್ರಮ ಅಲ್ಲ, ಸರ್ಕಾರಿ ಕಾರ್ಯಕ್ರಮ. ಆದ್ದರಿಂದ ಎಲ್ಲರನ್ನೂ ಕರೆದು ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಸ್ಥಳೀಯ ಶಾಸಕರಿಗೆ ಗೌರವ ಸಿಗಬೇಕು, ನಾವು ಯಾರನ್ನೂ ಬಿಟ್ಟು ಈ ಕಾರ್ಯಕ್ರಮ ಮಾಡುತ್ತಿಲ್ಲ ಎಂದು ಹೇಳಿದರು.
ನಾನು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಜೊತೆ ವೇದಿಕೆ ಹಂಚಿಕೊಳ್ಳುತ್ತೇನೆ: ಅಂದು ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟನೆಗೆ ಬೆಳಗಾವಿ ಜಿಲ್ಲೆಯ ನಾಯಕರಿಗೆ ಆಹ್ವಾನ ನೀಡಲಾಗುವುದು, ಅದರೊಂದಿಗೆ ಸ್ಥಳೀಯ ಶಾಸಕರಿಗೂ ಆಹ್ವಾನ ನೀಡಲಾಗುವುದು. ಇದು ಸರ್ಕಾರಿ ಕಾರ್ಯಕ್ರಮ ಆಗಿದ್ದರಿಂದ ಎಲ್ಲರಿಗೂ ಗೌರವ ಸಲ್ಲಬೇಕಾಗುತ್ತದೆ. ಅದರಲ್ಲೂ ಸ್ಥಳೀಯ ಶಾಸಕರಿಗೆ ಸಿಗಬೇಕಾದ ಗೌರವ ಸಿಗಲೇಬೇಕು. ಆ ಕಾರ್ಯಕ್ರಮದ ವೇದಿಕೆಯಲ್ಲಿ ನಾನು ಕೂಡ ಭಾಗವಹಿಸುತ್ತೇನೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವೈರಿಯಲ್ಲ, ರಾಜಕೀಯ ಬಂದಾಗ ಅದೆಲ್ಲ ಇರುತ್ತದೆ, ನಾನು ಅಷ್ಟು ಕೀಳು ಮಟ್ಟದ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದರು.
ವಿಧಾನಸಭಾ ಚುನಾವಣೆ ಉಸ್ತುವಾರಿ ವಿಚಾರ: ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾದ ಬಿ ಎಲ್ ಸಂತೋಷ್ ಅವರ ಜೊತೆ ಶುಕ್ರವಾರ ಸಭೆ ಏರ್ಪಡಿಸಲಾಯಿತು. ಈ ಸಭೆಯಲ್ಲಿ ನಾನು ಬೆಳಗಾವಿಯ 18 ಕ್ಷೇತ್ರಗಳಾದ ಗೋಕಾಕ್ ಅರಭಾವಿ ಬಿಟ್ಟು 16 ಕ್ಷೇತ್ರ, ಚಿತ್ರದುರ್ಗ ರಾಯಚೂರು, ಬಳ್ಳಾರಿ, ಮೈಸೂರು, ಕ್ಷೇತ್ರಗಳ ಉಸ್ತುವಾರಿ ನೀಡಿ ಎಂದು ಕೇಳಿದ್ದೇನೆ. ವರಿಷ್ಠರು ಏನು ತೀರ್ಮಾನ ಮಾಡುತ್ತಾರೆ ಎಂಬುದನ್ನು ನೋಡೋಣ ಎಂದು ತಿಳಿಸಿದರು.
ಶಿವಾಜಿ ಮೂರ್ತಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ಆರೋಪ : ಛತ್ರಪತಿ ಶಿವಾಜಿ ಮೂರ್ತಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಆರೋಪ ಮಾಡುತ್ತಿದ್ದಾರೆ. ಅಷ್ಟೊಂದು ಮಾಹಿತಿ ಇಲ್ಲಾ, ದಾಖಲಾತಿ ತರಿಸಿಕೊಂಡು ಮಾತನಾಡಲಾಗುವದು. ಹಿಂದೆ ನಗರದಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಬ್ಯಾಗ್ ಹಿಡಿದವ, ಬಾಗಿಲು ಕಾದಿರುವವರು ಹಣ ತಿಂದಿದ್ದಾರೆ ಎಂದು ಪರೋಕ್ಷವಾಗಿ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಮೂರ್ತಿ ಉದ್ಘಾಟನೆಗೆ ರಾಜಕೀಯ ಜಟಾಪಟಿ: ರಾಜಹಂಸಗಡನಲ್ಲಿ ನಿರ್ಮಾಣವಾಗಿರುವ ಛತ್ರಪತಿ ಶಿವಾಜಿ ಮೂರ್ತಿ ಉದ್ಘಾಟನೆಗೆ ರಾಜಕೀಯ ಜಟಾಪಟಿ ಪ್ರಾರಂಭವಾಗಿದ್ದು, ಮಾರ್ಚ್ 5ರಂದು ಕಾಂಗ್ರೆಸ್ ನಾಯಕರ ಜೊತೆಗೂಡಿ ಮೂರ್ತಿ ಉದ್ಘಾಟನೆ ಮಾಡಲಾಗುವುದೆಂದು ಬೆಳಗಾವಿಯ ಗ್ರಾಮೀಣ ಸುತ್ತಮುತ್ತ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಭಾವಚಿತ್ರ ಹಾಕಿ ಬ್ಯಾನರ್ ಅಳವಡಿಸಲಾಗಿದೆ. ಆದರೆ ಅವರಿಗಿಂತಲೂ ಮೊದಲೇ ಮಾರ್ಚ್ 2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಮೇಶ ಜಾರಕಿಹೊಳಿ ಅವರು ಉದ್ಘಾಟನೆಗೆ ಮೂಹೂರ್ತ ನಿಗದಿ ಮಾಡಿದ್ದಾರೆ.
ಇದನ್ನೂ ಓದಿ: ಮಹದಾಯಿ ವಿಚಾರದಲ್ಲಿ ಯಾರಿಗೂ ಆತಂಕ ಬೇಡ: ಸಚಿವ ಕಾರಜೋಳ