ಬೆಳಗಾವಿ: ಕೇಂದ್ರ ಸರ್ಕಾರ ಮಂಡಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ದೇಶದ ಮುಸ್ಲಿಂ ಪ್ರಜೆಗಳಿಗೆ ಯಾವುದೇ ತೊಂದರೆಯಿಲ್ಲ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಸ್ಪಷ್ಟಪಡಿಸಿದರು.
ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಏರ್ಪಡಿಸಿದ್ದ ಚಿಕ್ಕೋಡಿ-ಘಟಪ್ರಭಾ ಜೋಡಿ ರೈಲು ಮಾರ್ಗ ಉದ್ಘಾಟಿಸಿ ಮಾತನಾಡಿದ ಅವರು, ಪಾಕಿಸ್ತಾನ, ಬಾಂಗ್ಲಾ ಹಾಗೂ ಅಪಘಾನಿಸ್ತಾನ ಮುಸ್ಲಿಂ ರಾಷ್ಟ್ರಗಳೆಂದು ಘೋಷಿಸಿಕೊಂಡಿವೆ. ಈ ಮೂರು ದೇಶಗಳಲ್ಲಿರುವ ಹಿಂದೂಗಳು, ಕ್ರಿಶ್ಚಿಯನ್, ಜೈನರು, ಬೌದ್ಧ ಸಮುದಾಯಗಳಿಗೆ ರಕ್ಷಣೆ ಕೊಡಲಾಗಿದೆ. ಹಿಂದೂಗಳಿಗೆ ಇರೋ ಏಕೈಕ ದೇಶ ಅಂದ್ರೆ ಭಾರತ ಮಾತ್ರ. ಈ ಕಾಯ್ದೆಯಿಂದ ದೇಶದ ಯಾವ ಮುಸಲ್ಮಾನರಿಗೂ ಸಮಸ್ಯೆ ಇಲ್ಲ. ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ಬಾಂಗ್ಲಾದಿಂದ ಕೆಲವರು ಬೆಳಗಾವಿ ಬಂದು ಕಸಾಯಿಖಾನೆ ಆರಂಭಿಸಿದ್ರು. ಆಕಳುಗಳನ್ನು ಕಡೀತಿದ್ರು, ಅದಕ್ಕಾಗಿ ಹೋರಾಟ ಮಾಡಬೇಕಾಯಿತು. ನಮ್ಮವರು ಯಾರು ಹೊರಗಿನವರು ಯಾರು ಎಂಬುದನ್ನು ಅರಿತುಕೊಳ್ಳಬೇಕು. ನಮ್ಮ ದೇಶದ ಜನರಿಗೆ ಗೌರವ ಕೊಡಲು ಕಾನೂನು ತಂದಿದ್ದೇವೆ ಎಂದರು.
ಯಡಿಯೂರಪ್ಪ ಸಿಎಂ ಮಾಡಲು ರಾಜ್ಯದ ಜನತೆ ಮತ್ತೊಮ್ಮೆ ಆಶೀರ್ವಾದ ಮಾಡಿದ್ದೀರಿ. ಈ ಭಾಗದ ಜನರ ಅನುಕೂಲಕ್ಕೆ ಕೋಲ್ಡ್ ಸ್ಟೋರೇಜ್ ಘಟಕ ಆರಂಭಕ್ಕೆ ಪ್ರಯತ್ನ ಮಾಡ್ತೀವಿ. ರೈಲ್ವೆ ನಿಮ್ಮ ಆಸ್ತಿ, ಅದರ ಸ್ವಚ್ಛತೆ ಕಾಪಾಡೋದು ನಿಮ್ಮ ಜವಾಬ್ದಾರಿಯಾಗಿದೆ. ಬೆಳಗಾವಿ ಧಾರವಾಡ ನೇರ ರೈಲು ಮಾರ್ಗ ಸ್ಥಾಪನೆಗೆ ಕ್ರಮವಹಿಸುವೆ. ಬೆಳಗಾವಿ ಬೆಂಗಳೂರು ರೈಲುಮಾರ್ಗ ರಾಯಬಾಗವರೆಗೂ ವಿಸ್ತರಣೆ ಮಾಡಲಾಗುವುದು. ಬೇಕಾದ್ರೆ ಅದಕ್ಕೆ ದುರ್ಯೋಧನ ರೈಲು ಅಂತಾ ಹೆಸರಿಡೋಣ ಎಂದು ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಹೆಸರು ಹೇಳಿ ಹಾಸ್ಯ ಚಟಾಕಿ ಹಾರಿಸಿದರು. ಬಿಜೆಪಿಯಲ್ಲಿ ಧರ್ಮರಾಜ ಅಷ್ಟೇ ಅಲ್ಲ, ದುರ್ಯೋಧನನೂ ಇದ್ದಾನೆ ಎಂದರು.