ಚಿಕ್ಕೋಡಿ : ಸಮರ್ಪಕವಾಗಿ ಪರಿಹಾರ ಕೊಡಿ, ಇಲ್ಲವಾದರೆ ಕುಟುಂಬ ಸಮೇತರಾಗಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ನಿಪ್ಪಾಣಿ ತಾಲೂಕಿನ ಮಾಣಕಾಪೂರದ ನೆರೆ ಸಂತ್ರಸ್ತರೊಬ್ಬರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮನೆ ಕಳೆದುಕೊಂಡ ಸಂತ್ರಸ್ತ ಬಾಬುಸಾಹೇಬ ಪಾಟೀಲ ಮಾತನಾಡಿ, ಮನೆಯು ಸಂಪೂರ್ಣವಾಗಿ ಮುಳಗಡೆಯಾಗಿ ಕುಸಿದು ಹೋಗಿದೆ. ನಾವು ಸದ್ಯ ಬೀದಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಅಧಿಕಾರಿಗಳು ಮನೆಗೆ ಕೇವಲ 50ರಷ್ಟು ಮಾತ್ರವೇ ಹಾನಿಯ ಪರಿಹಾರ ನೀಡಲು ಮುಂದಾಗುತ್ತಿದ್ದಾರೆ. ಇದರಿಂದ 1 ಲಕ್ಷ ರೂ. ಪರಿಹಾರ ಸಿಗಲಿದೆ. ಇದರಿಂದ ನಾನು ಮನೆ ಕಟ್ಟಿಕೊಳ್ಳಲು ಸಾಧ್ಯ ವೆ ಎಂದು ಅಲವತ್ತುಕೊಂಡರು.
ಒಂದು ವೇಳೆ ಸಂಬಂದಪಟ್ಟ ಅಧಿಕಾರಿಗಳು ನನ್ನ ಮನೆಗೆ ಸಂಪೂರ್ಣ 100 ರಷ್ಟು ಪರಿಹಾರವನ್ನು ನೀಡದಿದ್ದರೆ. ನನ್ನ ಕುಟುಂಬದ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಗ್ರಾ.ಪಂ ಸದಸ್ಯ ರಾಜು ಮಾತನಾಡಿ, ಪಂಚಗಂಗಾ ನದಿಯಿಂದ ಮಾಣಕಾಪೂರ ಗ್ರಾಮದಲ್ಲಿ ಸುಮಾರು 200 ಮನೆಗಳು ಬಿದ್ದು ಹೋಗಿವೆ. ಆದರೆ, ಅಧಿಕಾರಿಗಳು ಮಾತ್ರ ನ್ಯಾಯೋಚಿತವಾಗಿ ಮನೆಗಳ ಸರ್ವೆ ಕಾರ್ಯ ಮಾಡುತ್ತಿಲ್ಲ. ಇದರಿಂದ ಗ್ರಾಮದ ಬಡ ಸಂತ್ರಸ್ತರಿಗೆ ಅನ್ಯಾಯವಾಗುತ್ತಿದೆ. ಹಲವು ಬಡವರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅಧಿಕಾರಿಗಳು ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ತಹಶೀಲ್ದಾರರ ಬಳಿ ನಮ್ಮ ಅಳಲು ತೋಡಿಕೊಂಡರು ಪ್ರಯೋಜನವಾಗಿಲ್ಲ. ಹೆಚ್ಚಿಗೆ ಮಾತನಾಡಿದರೆ ಜೈಲಿಗೆ ಹಾಕುಸುತ್ತೇನೆ ಎಂದು ಹೆದರಿಸುತ್ತಿದ್ದಾರೆ ಎಂದು ರಾಜು ಕುಂಬಾರ ಆರೋಪಿಸಿದರು.