ಬೆಳಗಾವಿ: ಮಾರಾಠಿಗರನ್ನು ಓಲೈಸುವ ಸಲುವಾಗಿ ಮರಾಠಿಯಲ್ಲಿ ಭಾಷಣ ಮಾಡಿದ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲರನ್ನು ಕೂಡಲೇ ಸಚಿವ ಸ್ಥಾನದಿಂದ ಕೈಬಿಡುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ಸೇರಿದ ಕರವೇ ಕಾರ್ಯಕರ್ತರು ಶ್ರೀಮಂತ ಪಾಟೀಲ ಅವರ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಕರ್ನಾಟಕದ ಗಡಿ ಜಿಲ್ಲೆ ಆಗಿರುವುದರಿಂದ ಎಲ್ಲಾ ಕನ್ನಡ ಮತ್ತು ಮರಾಠಿ ಭಾಷಿಗರು ಅತ್ಯಂತ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದ್ರೆ, ಅದನ್ನು ಕೆಡಿಸಿದ ಶ್ರೀಮಂತ ಪಾಟೀಲ್ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡುವ ಮೂಲಕ ಕೇವಲ ಮರಾಠಿ ಭಾಷೆಗೆ ಆದ್ಯತೆ ನೀಡಿದ್ದರು.
ಇತ್ತೀಚಿಗೆ ತಮ್ಮ ಕ್ಷೇತ್ರದಲ್ಲಿ ಮಹಾರಾಷ್ಟ್ರದ ಸಚಿವರನ್ನು ಕರೆಸಿ ಕನ್ನಡ ಭಾಷೆಗೆ ಆದ್ಯತೆ ನೀಡದೇ ಎಲ್ಲಾ ಫಲಕಗಳನ್ನು ಮರಾಠಿ ಭಾಷೆಯಲ್ಲಿ ಹಾಕಿ ಮರಾಠಿ ಭಾಷಿಗರನ್ನು ಓಲೈಸುವ ಪ್ರಯತ್ನ ಮಾಡಿ, ಕನ್ನಡಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ, ಸುರೇಶ ಗವನ್ನವರ, ನಿಂಗರಾಜ್ ಗುಂಡ್ಯಾಗೋಳ್, ಸಂತೋಷ್ ಇದ್ದರು.