ಚಿಕ್ಕೋಡಿ: ವಿದ್ಯಾರ್ಥಿಗಳು ಪ್ರತಿದಿನ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಥಣಿ ತಾಲೂಕಿಗೆ ತೆರಳುತ್ತಿದ್ದು, ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ಸರಿಯಾದ ಸಾರಿಗೆ ಬಸ್ ವ್ಯವಸ್ಥೆ ಇಲ್ಲ ಎಂದು ನೂರಾರು ವಿದ್ಯಾರ್ಥಿಗಳು ಕೆ.ಎಸ್.ಆರ್.ಟಿ.ಸಿ ಬಸ್ ತಡೆದು ಪ್ರತಿಭಟನೆ ಮಾಡಿದರು. ಇಲ್ಲಿ ವಿದ್ಯಾರ್ಥಿಗಳು ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಅಥಣಿ ತಾಲೂಕಿನ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ, ಐನಾಪೂರ, ಮೋಳೆ, ಕೌಲಗುಡ್ಡ, ಮುರಗುಂಡಿ ಗ್ರಾಮದ ವಿದ್ಯಾರ್ಥಿಗಳು ಅಥಣಿ ತಾಲೂಕಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿದ್ದು, ಬಸ್ ದಟ್ಟನೆಯಿಂದ ವಿಧ್ಯಾರ್ಥಿನಿಯರು ಕಾಲೇಜಿಗೆ ಹೊಗಲು ನಿರಾಕರಿಸುತ್ತಿದ್ದಾರೆ. ಹಾಗೂ ಗ್ರಾಮದಲ್ಲಿ ಬಸ್ ನಿಲ್ಲದೇ ಇರುವುದರಿಂದ ಕಾಲೇಜು ಅವಧಿಗೆ ಸರಿಯಾಗಿ ಹೋಗದೆ ಇರುವುದರಿಂದ ಮತ್ತೆ ಮರಳಿ ಮನೆಗೆ ಹೋಗಿರುವ ಹಲವಾರು ಉದಾಹರಣೆಗಳಿವೆ. ಇದರಿಂದ ಪಾಲಕರು ಚಿಂತಾಜನಕರಾಗಿದ್ದು, ಆದಷ್ಟು ಬೇಗ ವಿದ್ಯಾರ್ಥಿಗಳ ಅನಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸ್ಪಂದನೆ ನೀಡಬೇಕಿದೆ ಎಂದು ಪಾಲಕರು ಆಗ್ರಹಿಸುತ್ತಿದ್ದಾರೆ.
ಉಗಾರ-ಅಥಣಿ ಮಾರ್ಗವಾಗಿ ಸುಮಾರು ಪ್ರತಿದಿನ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಚರಿಸುತ್ತಿದ್ದಾರೆ. ರೈಲಿನಿಂದ ಉಗಾರಕ್ಕೆ ಇಳಿಯುವ ಪ್ರಯಾಣಿಕರಿಂದ ಅಥಣಿ ಬಸ್ ತುಂಬುತ್ತಿದೆ. ಇದರಿಂದ ಮೊಳೆ, ಕೌಲಗುಡ್ಡ, ಮುರಗುಂಡಿ ಗ್ರಾಮದ ವಿದ್ಯಾರ್ಥಿಗಳು ಅಥಣಿಗೆ ಹೋಗಲು ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ಇರುವುದರಿಂದ ಇಲ್ಲಿನ ವಿದ್ಯಾರ್ಥಿಗಳು ಎರಡು ಕ್ಲಾಸ್ ಮುಗಿದ ಮೇಲೆ ಹೋಗುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ಹಲವಾರು ಬಾರಿ ಅಥಣಿ ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು ಸಹ ಇದರ ಬಗ್ಗೆ ಕಾಳಜಿ ತೋರಿಸದೆ ಇರುವುದರಿಂದ ಬೇಸತ್ತ ನೂರಾರು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಮಾಡಿದರು.
ನಂತರ ಅಥಣಿ ವ್ಯವಸ್ಥಾಪಕರು ಕರೆ ಮಾಡಿ ನಾಳೆಯಿಂದ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದಾಗ ಪ್ರತಿಭಟನೆಯನ್ನು ವಿದ್ಯಾರ್ಥಿಗಳು ಕೈ ಬಿಟ್ಟಿದ್ದಾರೆ.