ಚಿಕ್ಕೋಡಿ(ಬೆಳಗಾವಿ): ಹಿರೇಕೋಡಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಚಿಕ್ಕೋಡಿ ಪಟ್ಟಣದಲ್ಲಿ ಜೈನ್ ಧರ್ಮದ ಶ್ರಾವಕ ಶ್ರಾವಕಿಯರು ಬೃಹತ್ ಪ್ರತಿಭಟನೆ ನಡೆಸಿದರು. ಚಿಕ್ಕೋಡಿ ಪಟ್ಟಣದ ಆರ್‌ಡಿ ಮೈದಾನದಿಂದ 15 ಸಾವಿರಕ್ಕೂ ಹೆಚ್ಚು ಜನರು ಕೊಲ್ಲಾಪುರ ನಾಂದಣಿ ಮಠದ ಜೀನಸೇನ ಭಟ್ಟಾರಕ ಹಾಗೂ ವರೂರು ಮಠದ ಧರ್ಮಸೇನಾ ಭಟ್ಟಾರಕ, ಮತ್ತು ಕೊಲ್ಲಾಪುರದ ಕೀರ್ತಿಸೇನ ಭಟ್ಟಾರಕರ ನೇತೃತ್ವದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.

ಆರ್‌ಡಿ ಹೈಸ್ಕೂಲ್ ಮೈದಾನದಿಂದ ಮಹಾವೀರ ಸರ್ಕಲ್, ಬಸವೇಶ್ವರ ಸರ್ಕಲ್ ಮೂಲಕ ಚಿಕ್ಕೋಡಿ ಎಸಿ ಕಚೇರಿವರೆಗೂ ಪ್ರತಿಭಟನಾ ರ‍್ಯಾಲಿ ನಡೆಯಿತು. ಇನ್ಮುಂದೆ ಜೈನ್ ಮುನಿಗಳಿಗೆ ರಕ್ಷಣೆ ಸಿಗಬೇಕು, ಹಾಗೂ ಶ್ರೀಗಳ ಕೊಲೆ ಮಾಡಿರುವ ಹಂತಕರಿಗೆ ಕಠಿಣ ಶಿಕ್ಷೆ ಒದಗಿಸಬೇಕು ಎಂದು ಒತ್ತಾಯಿಸಿ ಭಟ್ಟಾರಕ ಸ್ವಾಮೀಜಿಗಳು ಎಸಿ ಮಾಧವ ಗೀತೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಇದೇ ವೇಳೆ, ನಾದಿನಿ ಮಠದ ಜೀನಸೇನ್ ಭಟ್ಟಾರಕ ಶ್ರೀಗಳು ಮಾತನಾಡಿ, ಭಾರತದ ಕಾನೂನಿನ ಮೇಲೆ ನಾವು ತುಂಬಾ ಗೌರವ ಹೊಂದಿದ್ದೇವೆ. ಇದರಿಂದ ಇವತ್ತು ಸಮಾಜ ಬಾಂಧವರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಮತ್ತು ಜೈನ ಸಮಾಜದ ಮುನಿ, ಮಹಾರಾಜರಿಗೆ ಸರ್ಕಾರ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ನಂತರ ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಇಡೀ ಜಗತ್ತಿಗೆ ಶಾಂತಿ ಸಂದೇಶ ಸಾರಿದ ಜೈನ ಧರ್ಮ ಇಂತಹ ಧರ್ಮ ಗುರುವನ್ನು ಭೀಕರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಇಬ್ಬರು ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲ ಗುರುಗಳಿಗೆ ಸರ್ಕಾರ ರಕ್ಷಣೆ ನೀಡಬೇಕು, ಸಮಾಜ ಧರ್ಮ ರಕ್ಷಣೆ ಮಾಡಬೇಕಾಗಿದೆ. ಇದರಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ. ಸರ್ಕಾರ ಆದಷ್ಟು ಬೇಗ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕು ಅಹಿಂಸಾ ಪರಮೋಧರ್ಮ ಸಂದೇಶ ಭಾರತಕ್ಕೆ ನೀಡಿದ ಜೈನಸಮುದಾಯ, ಜೈನಸಮುದಾಯದ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ಜೈನ ಮುನಿ ಹತ್ಯೆ ಖಂಡಿಸಿ ಮೌನಪ್ರತಿಭಟನೆ: ಜೈನ ಮುನಿ ಕಾಮಕುಮಾರ ಸ್ವಾಮೀಜಿ ಹತ್ಯೆ ಖಂಡಿಸಿ ಹಾವೇರಿಯಲ್ಲಿ ಜೈನ ಸಂಘಟನೆಗಳ ಸದಸ್ಯರು ಮೌನಪ್ರತಿಭಟನಾ ಮೆರವಣಿಗೆ ನಡೆಸಿದರು. ಹಾವೇರಿ ನಗರದ ಜೈನ ಬಸದಿಯಿಂದ ಸಿದ್ದಪ್ಪ ಸರ್ಕಲ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು 200ಕ್ಕೂ ಹೆಚ್ಚು ಜೈನರು ಪ್ರತಿಭಟನಾ ಮೆರವಣಿಗೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಜೈನ ಮುನಿಗಳಿಗೆ ಸರ್ಕಾರ ರಕ್ಷಣೆ ನೀಡಬೇಕು: ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ದಾವಣಗೆರೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜೈನ ಸಮುದಾಯ ಪ್ರತಿಭಟನೆ ನಡೆಸಿ, ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಈ ಪ್ರತಿಭಟನೆಯಲ್ಲಿ ಮುಸ್ಲಿಂ ಮುಖಂಡ ನಾಸೀರ್ ಹುಸೇನ್ ಭಾಗವಹಿಸಿ ಜೈನ ಮುನಿ ಕೊಲೆ ಮಾಡಿದ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ಬಳಿಕ ಅಪರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು
ಜೈನಾ ಸಮುದಾಯ ಮುಖಂಡ ಗೌತಮ್ ಜೈನ್ ಮಾತನಾಡಿ, ನಮ್ಮ ಸಮಾಜ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತ ಸಮಾಜವಾಗಿದೆ. ಶೇ 04 ರಷ್ಟು ಜನ ಸಂಖ್ಯೆ ಹೊಂದಿದ್ದು, ನಮಗೆ ರಕ್ಷಣೆ ಇಲ್ಲದಂತಾಗಿದೆ. ನಾವು ಭಯದ ವಾತಾವರಣದಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅಲ್ಪಸಂಖ್ಯಾತರು ಎಂದರೆ ಕೇವಲ ಒಬ್ಬರೇ ಅಲ್ಲಾ, ನಾವು ಕೂಡ ಇದ್ದೇವೆ. ರಾಜ್ಯ ಸರ್ಕಾರ ಈ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ. ಕೂಡಲೇ ಜೈನ ಮುನಿಗಳಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದರು.
ಜೈನ ಮುನಿ ಹಂತಕರನ್ನು ಗಲ್ಲಿಗೇರಿಸಿ: ಜೈನ ಮುನಿ ಕಾಮಕುಮಾರ ನಂದಿ ಹತ್ಯೆ ಖಂಡಿಸಿ ಜೈನ ಸಮಾಜದಿಂದ ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಜೈನ ಸಮುದಾಯದ ನೂರಾರು ಮುಖಂಡರು ಆಗಮಿಸಿ ಪ್ರತಿಭಟನೆ ನಡೆಸಿ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಹತ್ಯೆ ಹಿಂದಿನ ಸತ್ಯಾಸತ್ಯತೆ ಕುರಿತು ತನಿಖೆ ಆಗಬೇಕು. ಹತ್ಯೆಯ ಹಿಂದಿರುವ ಎಲ್ಲರನ್ನು ಬಂಧಿಸುವಂತೆ ಅಪರ ಡಿಸಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲೆಯ ಜೈನ ಸಮುದಾಯದ ಮುಖಂಡರು ಭಾಗಿಯಾಗಿದ್ದರು.
ಈ ವೇಳೆ, ಮಾತನಾಡಿದ ಜೈನ ಸಮಾಜದ ಮುಖಂಡ ಹಾಗೂ ಖ್ಯಾತ ವೈದ್ಯ ಡಾ. ಕಿರಣ ಓಸ್ವಾಲ್, ಹಂತಕರು ಜೈನ ಮುನಿಗಳನ್ನು ಒಂಬತ್ತು ಪೀಸ್ ಮಾಡಿ ಬರ್ಬರ ಹತ್ಯೆ ಮಾಡಿದ್ದಾರೆ. ಈ ರೀತಿಯ ಕೃತ್ಯ ನಡೆಯ ಬಾರದಿತ್ತು. ಜೈನ ಸಮುದಾಯವು ಯಾವುದೇ ಸಮಾಜದ ವಿರೋಧಿಗಳಲ್ಲ, ಈ ಪ್ರಕರಣದ ಉನ್ನತ ಮಟ್ಟದ ತನಿಖೆ ನಡೆಯಬೇಕು. ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: Jain monk murder: ಜೈನ ಮುನಿ ಹತ್ಯೆ ಪ್ರಕರಣದ ಹಿಂದೆ ಉಗ್ರಗಾಮಿಗಳ ಕೈವಾಡ ಇದೆ.. ಶಾಸಕ ಸಿದ್ದು ಸವದಿ