ಬೆಳಗಾವಿ: ಪತ್ನಿ, ಪ್ರಿಯಕರನಿಂದ ಪತಿ ರಮೇಶ್ ಕಾಂಬಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದವು.
ಇಲ್ಲಿನ ಅಂಬೇಡ್ಕರ್ ಗಲ್ಲಿಯ ಪೇಂಟರ್ ರಮೇಶ್ ಕಾಂಬಳೆ ಎಂಬುವವರನ್ನು ಆತನ ಪತ್ನಿ ಸಂಧ್ಯಾ ಮತ್ತು ಪ್ರಿಯಕರ ಬಾಳು ಬಿರಂಜೆ ಜೊತೆ ಸೇರಿ ತನ್ನ ಗಂಡನನ್ನೇ ಕೊಲೆ ಮಾಡಿದ್ದಳು. ಮಾರ್ಚ್ 23ರಂದು ಕೊಲೆ ಮಾಡಿ ಚೋರ್ಲಾ ಘಾಟ್‌ಗೆ ಆರೋಪಿಗಳು ಶವ ಎಸೆದಿದ್ದರು. ಈ ಘಟನೆ ನಡೆದು ಮೂರು ತಿಂಗಳ ನಂತರ ಕೊಲೆಯ ರಹಸ್ಯ ಬಯಲಾಗಿತ್ತು.
ಈ ಘಟನೆ ಖಂಡಿಸಿ ಇಂದು ಮಂಗಳವಾರ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ರ‍್ಯಾಲಿ ನಡೆಸಿದ ಪ್ರತಿಭಟನಾಕಾರರು, ರಮೇಶ್ ಕಾಂಬಳೆ ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ''ಅನೈತಿಕ ಸಂಬಂಧಕ್ಕೆ ಬಲಿಯಾಗಿ ತನ್ನ ಗಂಡನನ್ನೇ ಕೊಲೆ ಮಾಡಿದ ಪ್ರಕರಣ ಬೆಳಗಾವಿಯಲ್ಲಿ ನಡೆದಿದ್ದು ಖಂಡನೀಯ. ನಿಮಗೆ ಮನಸಿರದಿದ್ದರೆ ಡಿವೋರ್ಸ್ ಕೊಟ್ಟು ಹೋಗಿ. ಆದರೆ ಕೊಲೆ ಮಾಡಿ ಮಕ್ಕಳನ್ನು ಅನಾಥ ಮಾಡೋದು, ತಂದೆ- ತಾಯಿಯನ್ನು ಅನಾಥ ಮಾಡೋದು ನೀವು ಜೈಲಿಗೆ ಹೋಗೋದು ಯಾರಿಗೆ ಬೇಕು ಇಂತ ಜೀವನ? ಕಾನೂನಿನಲ್ಲಿ ನಿಮಗೆ ಅವಕಾಶಯಿದೆ. ಗಂಡ ಅಥವಾ ಹೆಂಡತಿ ಡಿವೋರ್ಸ್ ಕೊಟ್ಟು ಹೋಗಿ. ಆದರೆ, ಕೊಲೆ ಮಾಡಬೇಡಿ'' ಎಂದು ಕಿಡಿಕಾರಿದರು.
ಕೊಲೆ ಮಾಡಿದ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಲು ಒತ್ತಾಯಿಸಿದ ಪ್ರತಿಭಟನಾಕಾರರು, ''ರಮೇಶ್ ಕಾಂಬಳೆ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಅವರ ತಂದೆ- ತಾಯಿಗೆ ವಯಸ್ಸಾಗಿದೆ. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿ ರಮೇಶ್‌ನ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವಂತೆ'' ಮನವಿ ಮಾಡಿದರು.
ರಮೇಶ್ ಕಾಂಬಳೆ ತಾಯಿ ರಾಧಾಬಾಯಿ ಮಾತನಾಡಿ, ''ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು. ಕೊಲೆಗಾರರನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಸರ್ಕಾರ ನನ್ನ ಮೊಮ್ಮಕ್ಕಳಿಗೆ ಏನಾದರೂ ಪರಿಹಾರವನ್ನು ನೀಡಬೇಕು'' ಎಂದು ಕಣ್ಣೀರು ಹಾಕಿದರು.
ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮತ್ತು ವಕೀಲ ವಿರೇಶ ಕಿವಡಸನ್ನವರ ಮಾತನಾಡಿ, ''ಶಿತಲ್ ಚೌಗುಲೆ ಪ್ರಕರಣ ಬಳಿಕ ಈ ಭಯಾನಕ ಘಟನೆ ಆಗಿದೆ. ಇಂತಹ ಘಟನೆ ಬೆಳಗಾವಿಯಲ್ಲಿ ಮತ್ತೆ ಮರುಕಳಿಸಬಾರದು. ಈ ಹತ್ಯೆ ಪ್ರಕರಣದಿಂದ ಮಕ್ಕಳು ಅನಾಥವಾಗಿದ್ದಾರೆ. ಸರ್ಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಬೇಕು'' ಎಂದು ಆಗ್ರಹಿಸಿದರು. ರಮೇಶ್ ಕೊಲೆ ಮಾಡಿದ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರತಿಭಟನಾಕಾರು ಮನವಿ ಸಲ್ಲಿಸಿದರು.
ಇದನ್ನೂ ಓದಿ: ಸತ್ತ ಮೊಮ್ಮಗನ ಶವದೊಂದಿಗೆ ಐದು ದಿನ ಕಳೆದ ಅಜ್ಜಿ... ವೃದ್ಧೆಯ ಅವತಾರ ನೋಡಿ ಬೆಚ್ಚಿಬಿದ್ದ ಪೊಲೀಸ್